ದುಬೈ ಏರ್‌ಪೋರ್ಟ್ ಸಿಲುಕಿಕೊಂಡ ಕಿರ್ಗಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಭಾರತದ ಕುಸ್ತಿಪಟುಗಳಾದ ದೀಪಕ್, ಸುಜೀತ್
ಹೊಸದಿಲ್ಲಿ: ಗಲ್ಫ್ ರಾಷ್ಟ್ರದಲ್ಲಿ ಸುರಿದ ಕಂಡುಕೇಳರಿಯದ ಭಾರೀ ಮಳೆಯಿಂದಾಗಿ ಕಿರ್ಗಿಸ್ತಾನಕ್ಕೆ ತೆರಳುತ್ತಿದ್ದ ಭಾರತೀಯ ಕುಸ್ತಿಪಟುಗಳಾದ ದೀಪಕ್ ಪುನಿಯಾ ಹಾಗೂ ಸುಜೀತ್ ಕಲ್ಕಲ್ ದುಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಅವಕಾಶಕ್ಕೆ ಭಾರೀ ಹಿನ್ನಡೆಯಾಗಿದೆ.
ಟೋಕಿಯೊ ಗೇಮ್ಸ್ನಲ್ಲಿ ಪದಕ ಗೆಲ್ಲುವ ಸನಿಹಕ್ಕೆ ತಲುಪಿದ್ದ ದೀಪಕ್(86ಕೆಜಿ) ಹಾಗೂ ಸುಜೀತ್(65ಕೆಜಿ)ಏಶ್ಯ ಒಲಿಂಪಿಕ್ ಕ್ವಾಲಿಫೈಯರ್ಸ್ನಲ್ಲಿ ಭಾಗವಹಿಸಲು ಬಿಷ್ಕೆಕ್ಗೆ ತೆರಳುತ್ತಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಗೆ ಎರಡನೇ ಕೊನೆಯ ಅರ್ಹತಾ ಟೂರ್ನಿಯಾಗಿರುವ ಇದು ಶುಕ್ರವಾರ ಆರಂಭವಾಗಿದೆ.
ಆದರೆ, ಗಲ್ಫ್ ರಾಷ್ಟ್ರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಪ್ರಮುಖ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದ್ದು, ವಿಶ್ವದ ಅತ್ಯಂತ ಜನ ನಿಬಿಡ ವಿಮಾನ ನಿಲ್ದಾಣ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆಯಿಂದಾಗಿ ದೀಪಕ್ ಹಾಗೂ ಸುಜೀತ್ ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಈ ಇಬ್ಬರ ಜೊತೆಗೆ ರಶ್ಯದ ಕೋಚ್ ಕಮಲ್ ಮಾಲಿಕೋವ್ ಹಾಗೂ ಫಿಸಿಯೋ ಶುಭಂ ಗುಪ್ತಾ ಕೂಡ ನೆಲದ ಮೇಲೆ ಮಲಗಿದ್ದು ಮಳೆಯಿಂದಾಗಿ ಉಂಟಾದ ಬಿಕ್ಕಟ್ಟಿನಿಂದ ಸರಿಯಾದ ಆಹಾರವೂ ಲಭಿಸಿರಲಿಲ್ಲ.
ದೀಪಕ್ ಹಾಗೂ ಸುಜೀತ್ ಎಪ್ರಿಲ್ 16ರಿಂದ ದುಬೈ ವಿಮಾನನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ನಾಳೆ ಸ್ಪರ್ಧೆ ಇರುವ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಅವಕಾಶ ಅವರ ಕೈಯಿಂದ ಜಾರಿಹೋಗುತ್ತಿದೆ. ಅವರಿಗೆ ಬಿಷ್ಕೆಕ್ಗೆ ತೆರಳಲು ಯಾವುದೇ ವಿಮಾನ ಸಿಗುತ್ತಿಲ್ಲ. ನಾನು ಅವರ ಬಗ್ಗೆ ಚಿಂತಿತನಾಗಿದ್ದೇನೆ ಎಂದು ಸುಜೀತ್ ತಂದೆ ದಯಾನಂದ ಕಲ್ಕಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಟರ್ಕಿಯಲ್ಲಿ ನಡೆಯುವ ವಿಶ್ವ ಅರ್ಹತಾ ಪಂದ್ಯಗಳು ಪ್ಯಾರಿಸ್ ಗೇಮ್ಸ್ ಗೆ ಅರ್ಹತೆ ಪಡೆಯಲು ಇರುವ ಕೊನೆಯ ಅವಕಾಶವಾಗಿದೆ.