ಪ್ಯಾರಾ ಏಶ್ಯನ್‌ ಗೇಮ್ಸ್ :‌ ಮೊದಲ ದಿನವೇ 6 ಚಿನ್ನ, 6 ಬೆಳ್ಳಿ ಸಹಿತ 17 ಪದಕಗಳನ್ನು ಪಡೆದ ಭಾರತದ ಅಥ್ಲೀಟ್‌ಗಳು

Update: 2023-10-24 06:40 GMT

(Photo: Twitter/AvaniLekhara)

ಹಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಶ್ಯನ್‌ ಪ್ಯಾರಾ ಗೇಮ್ಸ್‌ನ ಮೊದಲ ದಿನದಂದು ಆರು ಚಿನ್ನ, ಆರು ಬೆಳ್ಳಿ ಮತ್ತು ಐದು ಕಂಚಿನ ಪದಕಗಳ ಸಹಿತ 17 ಪದಕಗಳನ್ನು ಬಾಚಿಕೊಂಡು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಚೀನಾ, ಇರಾನ್‌ ಮತ್ತು ಉಜ್ಬೆಕಿಸ್ತಾನಗಳಿವೆ.

ಪುರುಷರ ಕ್ಲಬ್‌ ಥ್ರೋ ಎಫ್‌51 ಸ್ಪರ್ಧೆಯಲ್ಲಿ ಭಾರತದ ಪ್ರಣವ್‌ ಸೂರ್ಮ ಚಿನ್ನ ಗೆದ್ದರು. ಏಷ್ಯನ್‌ ಪ್ಯಾರಾ ಗೇಮ್ಸ್‌ ದಾಖಲೆಯನ್ನು ಅವರು 30.01 ಮೀಟರ್‌ ದೂರ ಎಸೆಯುವ ಮೂಲಕ ಮುರಿದರು. ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ಧರಂಬೀರ್‌ ಮತ್ತು ಅಮಿತ್‌ ಕುಮಾರ್‌ ಪಡೆದರು.

ಸೂರ್ಮ ಅವರು 16 ವರ್ಷದವರಿರುವಾಗ ಅಪಘಾತದಲ್ಲಿ ಬೆನ್ನು ಹುರಿಗೆ ಗಾಯವುಂಟಾದ ನಂತರ ದೇಹದ ಎಡ ಭಾಗದ ಮೇಲೆ ಸ್ವಾಧೀನ ಕಳೆದುಕೊಂಡಿದ್ದರು, 2019ರಲ್ಲಿ ಅವರು ಬೀಜಿಂಗ್‌ ವಿಶ್ವ ಪ್ಯಾರ ಅಥ್ಲೆಟಿಕ್ಸ್‌ ಗ್ರ್ಯಾಂಡ್‌ ಪ್ರಿಕ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

ಭಾರತದ ಅವನಿ ಲೇಖರ ಆರ್‌2 10ಮೀ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌1 ವಿಭಾಗದಲ್ಲಿ ದಾಖಲೆ ಸ್ಕೋರ್‌ 249.6ನೊಂದಿಗೆ ಚಿನ್ನದ ಪದಕ ಗಳಿಸಿದರು. ರುದ್ರಾಂಶ್‌ ಖಂಡೇಲ್ವಾರ್‌ ಅವರು ಪಿ4 ಮಿಕ್ಸೆಡ್‌ 50 ಮೀಟರ್‌ ಪಿಸ್ತೂಲ್‌ ಎಸ್‌ಎಚ್‌1 ಸ್ಪರ್ಧೆಯಲ್ಲಿ ಬೆಳ್ಳಿ ಗಳಿಸಿದರು, 23 ವರ್ಷದ ರುದ್ರಾಂಶ್‌, 2012ರಲ್ಲಿ ನಡೆದ ರಸ್ತೆ ಅಪಘಾತದ ನಂತರ ಗಾಲಿಕುರ್ಚಿಯನ್ನೇ ಅವಲಂಬಿಸಬೇಕಾಗಿದೆ.

ಭಾರತದ ಶೈಲೇಸ್‌ ಕುಮಾರ್‌ 1.82 ಮೀಟರ್‌ ದಾಖಲೆ ಜಿಗಿತದೊಂದಿಗೆ ಚಿನ್ನ ಗೆದ್ದರೆ ಮರಿಯಪ್ಪನ್‌ ತಂಗವೇಲು (1.80ಮೀ) ಬೆಳ್ಳಿ ಗೆದ್ದರು. ನಿಶದ್‌ ಕುಮಾರ್‌ ಪುರುಷರ ಹೈಜಂಪ್‌ 1ಇ47 ವಿಭಾಗದಲ್ಲಿ ಚಿನ್ನ ಗೆದ್ದರೆ, ರಾಮ್‌ ಪಾಲ್‌ ಕಂಚಿನ ಪದಕ ಪಡೆದರು.

ಭಾರತದ ಅಂಕುರ್‌ ಧಾಮ ಮತ್ತು ಪ್ರವೀನ್‌ ಕುಮಾರ್‌ 5000 ಮೀ ಟಿ11 ಮತ್ತು ಹೈಜಂಪ್‌ 1ಇ64ನಲ್ಲಿ ಕ್ರಮವಾಗಿ ಚಿನ್ನ ಗೆದ್ದರು.

ಒಂದು ಕಾಲು ಕಳೆದುಕೊಂಡಿರುವ ಹಾಗೂ ಕೃತಕ ಕಾಲುಗಳನ್ನು ಹೊಂದಿರುವ ಅಥ್ಲೀಟುಗಳಿಗಾಗಿನ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್‌ ಅವರು ದಾಖಲೆ 2.02 ಮೀಟರ್‌ ಜಿಗಿತದ ಮೂಲಕ ಚಿನ್ನ ಗೆದ್ದರೆ ರೇಣು ಉನ್ನಿ ಕಂಚಿನ ಪದಕ ಪಡೆದರು.

ಪುರುಷರ ಶಾಟ್‌ಪುಟ್‌ ಎಫ್‌ 11 ಸ್ಪರ್ಧೆಯಲ್ಲಿ ಮೋನು ಘಂಗಸ್‌ ಕಂಚಿನ ಪದಕ ಪಡೆದರೆ ಮಹಿಳೆಯರ ಕೇನೋ ವಿಎಲ್‌ ಸ್ಪರ್ಧೆಯಲ್ಲಿ ಪ್ರಾಚಿ ಯಾದವ್‌ ಬೆಳ್ಳಿ ಗೆದ್ದರು. ಜೂಡೋದಲ್ಲಿ ಕಪಿಲ್‌ ಪರ್ಮಾರ್‌ 60 ಕೆಜಿ ಜೆ1 ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರೆ, ಕೋಕಿಲಾ ಮಹಿಳೆಯರ 48 ಕೆಜಿ ಜೆ12 ವಿಭಾಗದಲ್ಲಿ ಕಂಚು ಗೆದ್ದರು.

ಟ್ವೀಕಾಂಡೋ ಸ್ಪರ್ಧೆಯಲ್ಲಿ ಅರುಣಾ ಕಂಚಿನ ಪದಕ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News