ಒಲಿಂಪಿಕ್ಸ್ ನಲ್ಲಿ ಭಾರತದ ಬಂಗಾರದ ಸಾಧನೆ
ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ಯಾವುದೇ ಕ್ರೀಡಾಪಟು ಇಲ್ಲವೇ ತಂಡಕ್ಕೆ ಯಶಸ್ಸಿನ ಶಿಖರವಾಗಿರುತ್ತದೆ. ಭಾರತವು ಈ ತನಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಚಿನ್ನದ ಪದಕಗಳನ್ನು ಜಯಿಸಿದೆ. ಈ ಪೈಕಿ ಪುರುಷರ ಹಾಕಿ ತಂಡವೊಂದೇ 8 ಚಿನ್ನದ ಪದಕ ಗೆದ್ದುಕೊಂಡಿದೆ. ಅಭಿನವ್ ಬಿಂದ್ರಾ ಹಾಗೂ ನೀರಜ್ ಚೋಪ್ರಾ ಅವರು ವೈಯಕ್ತಿಕ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ್ದರು.
ಭಾರತೀಯ ಪುರುಷರ ಹಾಕಿ ತಂಡವು 1928ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿತ್ತು. 1920ರಿಂದ 1950ರ ತನಕ ಭಾರತವು ಹಾಕಿಯಲ್ಲಿ ಅಜೇಯವಾಗುಳಿದಿದ್ದು, ವಿಶ್ವ ಶ್ರೇಷ್ಠ ತಂಡವಾಗಿ ಮೆರೆದಾಡಿತ್ತು. 1928ರ ಗೇಮ್ಸ್ ನಲ್ಲಿ ಭಾರತವು ಒಟ್ಟು 29 ಗೋಲುಗಳನ್ನು ಗಳಿಸಿದ್ದು, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಒಬ್ಬರೇ 14 ಗೋಲು ಗಳಿಸಿದ್ದರು.
1932ರಲ್ಲಿ ವಿಶ್ವವು ಮಹಾ ಆರ್ಥಿಕ ಕುಸಿತದಿಂದ ಪರದಾಡುತ್ತಿದ್ದಾಗ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಕೇವಲ 3 ತಂಡಗಳು ಭಾಗವಹಿಸಿದ್ದವು. ಅಮೆರಿಕ ಹಾಗೂ ಜಪಾನ್ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಭಾರತವು 2ನೇ ಚಿನ್ನ ಗೆದ್ದುಕೊಂಡಿತ್ತು.
1936ರಲ್ಲಿ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಧ್ಯಾನ್‌ಚಂದ್ ನಾಯಕತ್ವದಲ್ಲಿ ಭಾರತವು ಹ್ಯಾಟ್ರಿಕ್ ಚಿನ್ನ ಜಯಿಸಿತು. ಭಾರತವು ಫೈನಲ್‌ನಲ್ಲಿ ಜರ್ಮನಿಯನ್ನು 8-1ರಿಂದ ಸೋಲಿಸಿತ್ತು. ಧ್ಯಾನ್‌ಚಂದ್ ಫೈನಲ್‌ನಲ್ಲಿ 4 ಗೋಲು ಗಳಿಸಿದ್ದರು.
ಸ್ವಾತಂತ್ರ‍್ಯ ಪಡೆದ ನಂತರವೂ ಭಾರತದ ಹಾಕಿ ತಂಡ ತನ್ನ ಪ್ರಾಬಲ್ಯ ಮುಂದುವರಿಸಿದ್ದು 1948ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸ್ವತಂತ್ರ ಭಾರತವಾಗಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಕಿಶನ್ ಲಾಲ್ ನೇತೃತ್ವದಲ್ಲಿ 4ನೇ ಚಿನ್ನ ಗೆದ್ದುಕೊಂಡಿತು.
ನಾಯಕ ಕೆ.ಡಿ. ಸಿಂಗ್ ಬಾಬಾ ನೇತೃತ್ವದಲ್ಲಿ ಭಾರತವು 1952ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಸತತ 5ನೇ ಚಿನ್ನದ ಪದಕ ಜಯಿಸಿತು. ಉಪ ನಾಯಕ ಬಲ್ಬೀರ್ ಸಿಂಗ್ 3 ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿದ್ದರು.
ಭಾರತವು ಒಲಿಂಪಿಕ್ಸ್ನಲ್ಲಿ ಸತತ 6ನೇ ಚಿನ್ನದ ಪದಕ ಜಯಿಸಿ ಅಜೇಯ ಓಟ ಮುಂದುವರಿಸಿತು. ಮಾತ್ರವಲ್ಲ 1956ರ ಮೆಲ್ಬರ್ನ್ ಗೇಮ್ಸ್ ನಲ್ಲಿ ಪೂರ್ಣ ಪಂದ್ಯಾವಳಿಯಲ್ಲಿ ಕ್ಲೀನ್‌ಶೀಟ್ ಕಾಯ್ದುಕೊಂಡಿತು.
ಭಾರತೀಯ ಹಾಕಿ ತಂಡದ ಸತತ ಗೆಲುವಿನ ಓಟಕ್ಕೆ 1960ರಲ್ಲಿ ಪಾಕಿಸ್ತಾನ ಬ್ರೇಕ್ ಹಾಕಿತು. ಆದರೆ 1964ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಮ್ಮೆ ಚಿನ್ನ ಜಯಿಸಿದ ಭಾರತ ಮರು ಹೋರಾಟ ನೀಡಿತು.
1980ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತವು ಮೊದಲಿನ ಲಯಕ್ಕೆ ಮರಳಿತ್ತು. ಫೈನಲ್‌ನಲ್ಲಿ ಸ್ಪೇನ್ ತಂಡವನ್ನು 4-3 ಅಂತರದಿಂದ ರೋಚಕವಾಗಿಮಣಿಸಿ 8ನೇ ಬಾರಿ ಚಿನ್ನದ ಪದಕ ಜಯಿಸಿತ್ತು.
ಭಾರತವು 2000 ಹಾಗೂ 2004ರಲ್ಲಿ ವೇಟ್‌ಲಿಫ್ಟಿಂಗ್ ಹಾಗೂ ಶೂಟಿಂಗ್‌ನಲ್ಲಿ ಪದಕಗಳನ್ನು ಜಯಿಸಿ 21ನೇ ಶತಮಾನದಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಮಿಂಚತೊಡಗಿತು. ಆದರೆ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಪುರುಷರ 10 ಮೀ.ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬಿಂದ್ರಾ ಈ ಸಾಧನೆ ಮಾಡಿದ್ದರು.
ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಜಾವೆಲಿನ್ ಎಸೆತದಲ್ಲಿ ಪ್ರಶಸ್ತಿ ಬಾಚಿಕೊಂಡ ನೀರಜ್ ಚೋಪ್ರಾ ಟ್ರ‍್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು. ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದ ಚೋಪ್ರಾ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರು. 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಭಾರತವು ಒಟ್ಟು 7 ಪದಕಗಳನ್ನು ಜಯಿಸಿ ಒಲಿಂಪಿಕ್ಸ್ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿತು.
ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದಿರುವ ಚಿನ್ನದ ಪದಕಗಳ ಪಟ್ಟಿ ಇಲ್ಲಿದೆ
ತಂಡ ಕ್ರೀಡೆ ಸ್ಫರ್ಧೆ ಒಲಿಂಪಿಕ್ಸ್
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಆಮ್‌ಸ್ಟರ್‌ಡ್ಯಾಮ್ 1928
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಲಾಸ್ ಏಂಜಲಿಸ್ 1932
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಬರ್ಲಿನ್ 1936
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಲಂಡನ್ 1948
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಹೆಲ್ಸಿಂಕಿ 1952
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಮೆಲ್ಬರ್ನ್ 1956
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಟೋಕಿಯೊ 1964
ಭಾರತೀಯ ಪುರುಷರ ಹಾಕಿ ತಂಡ ಹಾಕಿ ಪುರುಷರ ಹಾಕಿ ಮಾಸ್ಕೊ 1980
ಅಭಿನವ್ ಬಿಂದ್ರಾ ಶೂಟಿಂಗ್ ಪುರುಷರ 10 ಮೀ. ಏರ್ ರೈಫಲ್ ಬೀಜಿಂಗ್ 2008
ನೀರಜ್ ಚೋಪ್ರಾ ಅತ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ ಟೋಕಿಯೊ 2020