ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮನೋಜ್ ತಿವಾರಿ ನಿವೃತ್ತಿ

Update: 2023-08-03 16:15 GMT

ಹೊಸದಿಲ್ಲಿ: ಭಾರತ ಹಾಗೂ ಬಂಗಾಳದ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೋಜ್ ತಿವಾರಿ ಗುರುವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಕ್ರಿಕೆಟ್ ಪಂದ್ಯಕ್ಕೆ ಗುಡ್ ಬೈ ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಬರೆದಿದ್ದಾರೆ. ಈ ಮೂಲಕ ತಮ್ಮ ವಿಶಿಷ್ಟ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ತಿವಾರಿ 2008ರಿಂದ 2015ರ ತನಕ ಭಾರತ ಕ್ರಿಕೆಟ್ ತಂಡದ ಪರ 12 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದಾಗಲೇ 2021ರಲ್ಲಿ ಬಂಗಾಳದ ಅಸೆಂಬ್ಲಿ ಚುನಾವಣೆಗೆ ಮೊದಲು ಆಡಳಿತಾರೂಢ ಟಿಎಂಸಿಯನ್ನು ಸೇರ್ಪಡೆಯಾಗಿ ರಾಜಕೀಯ ರಂಗವನ್ನು ಪ್ರವೇಶಿಸಿದ್ದ ಮನೋಜ್ ತಿವಾರಿ ಶಿಬಪುರ್ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಂಗಾಳದ ಮಾಜಿ ಕ್ರಿಕೆಟ್ ನಾಯಕ ಲಕ್ಷ್ಮೀ ರತನ್ ಶುಕ್ಲಾ ವಿರುದ್ಧ ಜಯ ಗಳಿಸಿದ್ದಲ್ಲದೆ ಪ್ರಸ್ತುತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳದ ಸರಕಾರದಲ್ಲಿ ಕ್ರೀಡೆ ಹಾಗೂ ಯುವಜನ ವ್ಯವಹಾರ ಸಚಿವರಾಗಿದ್ದಾರೆ.

ರಾಜಕೀಯ ಪ್ರವೇಶಿಸಿದ್ದರೂ ಕ್ರಿಕೆಟ್ ಮೇಲಿನ ಅವರ ಗೀಳು ಕಡಿಮೆಯಾಗಿರಲಿಲ್ಲ. ಹೀಗಾಗಿ ಅವರು 2022-23ರ ದೇಶೀಯ ಋತುವಿನಲ್ಲಿ ಕ್ರಿಕೆಟ್ ಮೈದಾನಕ್ಕೆ ವಾಪಸಾಗಿದ್ದರು. 37ರ ವಯಸ್ಸಿನಲ್ಲಿ ಬಂಗಾಳ ಕ್ರಿಕೆಟ್ ತಂಡವನ್ನು ಮರು ಪ್ರವೇಶಿಸಿದ್ದ ತಿವಾರಿ ಬಂಗಾಳ ತಂಡ ಫೈನಲ್ ಹಂತಕ್ಕೆ ತಲುಪಲು ನೇತೃತ್ವ ವಹಿಸಿದ್ದರು. ಪ್ರತಿಷ್ಠಿತ ಈಡನ್‌ಗಾರ್ಡನ್ಸ್ ಸ್ಟೇಡಿಯಮ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬಂಗಾಳ ಸ್ಫೂರ್ತಿಯುತ ಹೋರಾಟವನ್ನು ನೀಡಿದ್ದರೂ ಸೌರಾಷ್ಟ್ರ ಸೋಲುಂಡಿತ್ತು. ಈ ಪಂದ್ಯವು ಮನೋಜ್ ತಿವಾರಿ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಿತ್ತು.

ಬಲಗೈ ಬ್ಯಾಟರ್ 12 ಏಕದಿನ ಪಂದ್ಯಗಳಲ್ಲಿ ಒಟ್ಟು 287 ರನ್ ಗಳಿಸಿದ್ದರು. 2011ರಲ್ಲಿ ಚೆನ್ನೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದರು.

19 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 29 ಶತಕಗಳ ಸಹಿತ 9,908 ರನ್ ಗಳಿಸಿದ್ದು, 10,000 ರನ್ ಪೂರೈಸುವುದರಿಂದ ಕೇವಲ 92 ರನ್‌ನಿಂದ ವಂಚಿತರಾದರು. 2004ರಲ್ಲಿ ಕೋಲ್ಕತಾದಲ್ಲಿ ದೀಪ್‌ದಾಸ್ ಗುಪ್ತಾ ನಾಯಕತ್ವದ ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದರು. ಲಿಸ್ಟ್ ಎ ಪಂದ್ಯಗಳಲ್ಲಿ ಒಟ್ಟು 5,581 ರನ್ ಗಳಿಸಿದ್ದರು.

ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಶೈಲಿಯ ಬ್ಯಾಟರ್ ತಿವಾರಿ ಅವರು ಎಂ.ಎಸ್. ಧೋನಿ ನೇತೃತ್ವದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪರದಾಡಬೇಕಾಯಿತು. ಧೋನಿ ಎಡಗೈ ಬ್ಯಾಟರ್ ಸುರೇಶ್ ರೈನಾಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ವಿಂಡೀಸ್ ವಿರುದ್ಧ ಶತಕ ಗಳಿಸಿದ ನಂತರ 14 ಏಕದಿನ ಪಂದ್ಯಗಳಿಂದ ಕೈಬಿಡಲ್ಪಟ್ಟರು. ನಂತರ ತಂಡಕ್ಕೆ ವಾಪಸಾದಾಗ 2 ಪಂದ್ಯಗಳಲ್ಲಿ 65 ರನ್ ಗಳಿಸಿದ್ದಲ್ಲದೆ 4 ವಿಕೆಟ್‌ಗಳನ್ನು ಕಬಳಿಸಿದ್ದರು ಆದರೆ, ಮತ್ತೊಮ್ಮೆ ತಂಡದಿಂದ ಹೊರಗುಳಿದರು. ಗಾಯದ ಸಮಸ್ಯೆ ಕೂಡ ಅವರನ್ನು ಬೆಂಬಿಡದೆ ಕಾಡಿತ್ತು.

2012ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಿಸಿದಾಗ ಕೆಕೆಆರ್‌ನ ಸದಸ್ಯರಾಗಿದ್ದ ತಿವಾರಿ ಸಿಎಸ್‌ಕೆ ವಿರುದ್ಧ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಗೆಲುವಿನ ರನ್ ಗಳಿಸಿದ್ದರು.

ತಿವಾರಿ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದು, ಒಟ್ಟು 183 ಟಿ-20 ಪಂದ್ಯಗಳನ್ನು ಆಡಿದ್ದಾರೆ. 116.43ರ ಸ್ಟ್ರೈಕ್‌ರೇಟ್‌ನಲ್ಲಿ 3,436 ರನ್ ಗಳಿಸಿದ್ದಾರೆ.

ಕ್ರಿಕೆಟ್ ಪಂದ್ಯ ನನಗೆ ಎಲ್ಲವನ್ನೂ ನೀಡಿದೆ. ಜೀವನದಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಎದುರಿಸಿದ್ದ ನಾನು ಈ ಹಂತ ತಲುಪುವ ಕುರಿತಂತೆ ಕನಸು ಕೂಡ ಕಂಡಿರಲಿಲ್ಲ. ಕ್ರಿಕೆಟಿಗೆ ಹಾಗೂ ದೇವರಿಗೆ ನಾನು ಆಭಾರಿಯಾಗಿರುವೆ. ತಂದೆಗೆ ಸಮಾನರಾದ ಕೋಚ್ ಮನಬೆಂದ್ರ ಘೋಷ್ ನನ್ನ ಕ್ರಿಕೆಟ್ ಪಯಣದ ಆಧಾರಸ್ತಂಭವಾಗಿದ್ದರು. ಅವರಿಲ್ಲದೆ ಇರುತ್ತಿದ್ದರೆ ನಾನು ಕ್ರಿಕೆಟ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News