ಭಾರತದ ವಿಶ್ವಕಪ್ ಫೈನಲ್ ಸೋಲಿಗೆ ಟಿವಿ, ಸಾಮಾಜಿಕ ಮಾಧ್ಯಮ, ಅಭಿಮಾನಿಗಳು ಕಾರಣ: ವಸೀಂ ಅಕ್ರಂ
ಕರಾಚಿ: ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿ 50 ಓವರ್‌ಗಳ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತ ತಂಡ ಆಸ್ಟ್ರೇಲಿಯದ ಆಲ್‌ರೌಂಡ್ ಆಟಕ್ಕೆ ತತ್ತರಿಸಿ ಪ್ರಶಸ್ತಿ ವಂಚಿತವಾಯಿತು. ಆಸ್ಟ್ರೇಲಿಯವು ಆರನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿತ್ತು. ಭಾರತದ ಕೋಟ್ಯಂತರ ಅಭಿಮಾನಿಗಳು ಸೋಲಿನ ಗಾಯದಿಂದ ಹೊರಬರಲು ಪರದಾಡುತ್ತಿರುವಾಗ, ಟೀಮ್ ಇಂಡಿಯಾದ ಸೋಲಿಗೆ ಟಿವಿ, ಸಾಮಾಜಿಕ ಮಾಧ್ಯಮ ಹಾಗೂ ಅಭಿಮಾನಿಗಳನ್ನು ದೂಷಿಸಬೇಕು ಎಂದು ಪಾಕಿಸ್ತಾನದ ಲೆಜೆಂಡ್ ವಸೀಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಅಭಿಮಾನಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ ಅಕ್ರಂ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳು ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ಮೊದಲೇ ಭಾರತವನ್ನು ಚಾಂಪಿಯನ್ ತಂಡವನ್ನಾಗಿ ಬಿಂಬಿಸಿದ್ದವು. ಅದು ಆಟಗಾರರ ಮೇಲೆ ಒತ್ತಡವನ್ನು ಹೆಚ್ಚಿಸಿತು ಹಾಗೂ ಜನರ ಭರವಸೆಯನ್ನು ಇಮ್ಮಡಿಗೊಳಿಸಿತು ಎಂದರು.
ಭಾರತ ತಂಡವು ಪಂದ್ಯಾವಳಿಯುದ್ದಕ್ಕೂ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದೆ. ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿ ಸ್ಥಿರ ಪ್ರದರ್ಶನ ನೀಡಿತ್ತು. ಆದರೆ ಟಿವಿ, ಸಾಮಾಜಿಕ ಮಾಧ್ಯಮ, ಅಭಿಮಾನಿಗಳು, ಫೈನಲ್ ಪಂದ್ಯಕ್ಕಿಂತ ಮೊದಲೇ ಭಾರತ ವಿಶ್ವಕಪ್ ಗೆದ್ದುಬಿಟ್ಟಿತು ಎಂದು ಬಿಂಬಿಸ ತೊಡಗಿದವು. ನೀವು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಅವರು ಚೆನ್ನಾಗಿ ಆಡಿದ್ದರಿಂದ ನೀವು ಜನರ ವಿಶ್ವಾಸ ಹೆಚ್ಚಿಸಿದ್ದೀರಿ ನಿಜ. ಇಲ್ಲಿ ನೀವು ಸಂಪೂರ್ಣವಾಗಿ ತಪ್ಪು ಮಾಡಿದ್ದೀರಿ ಎಂದು ಹೇಳಲಾರೆ. ಒಂದು ಕೆಟ್ಟ ದಿನ ಭಾರತ ಸೋಲುಂಡಿದೆ. ಆಸ್ಟ್ರೇಲಿಯಕ್ಕೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಅಕ್ರಂ ಹೇಳಿದರು.
ಫೈನಲ್‌ನಲ್ಲಿ ಭಾರತ ತಂಡ ಸೋತಾಗ ನನಗೆ ಆಘಾತವಾಯಿತು. 1999ರ ವಿಶ್ವಕಪ್ ಫೈನಲ್ ಸೋಲಿನ ಕುರಿತು ನನ್ನ ಬಳಿ ಈಗಲೂ ಅಭಿಮಾನಿಗಳು ಪ್ರಶ್ನಿಸುತ್ತಾರೆ. ಭಾರತ ಹಾಗೂ ಪಾಕಿಸ್ತಾನದ ಅಭಿಮಾನಿಗಳಿಗೆ ಸ್ಮರಣಶಕ್ತಿ ಜಾಸ್ತಿ ಇದೆ. ನಾವು ಫೈನಲ್ ಸೋತು 30 ವರ್ಷಗಳು ಕಳೆದರೂ ಟಾಸ್ ಜಯಿಸಿದ ನಂತರ ಬ್ಯಾಟಿಂಗ್ ಆಯ್ದುಕೊಂಡಿದ್ದೇಕೆ? ಎಂದು ನನಗೆ ಈಗಲೂ ಕೇಳುತ್ತಿದ್ದಾರೆ. ಹೀಗಾಗಿ ನಾನು ಸಾಮಾಜಿಕ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರಾಷ್ಟ್ರವಾಗಿ ನಾವಿದನ್ನು ಮರೆತು ಮುನ್ನಡೆಯಬೇಕು. ಇನ್ನು ಆರು ತಿಂಗಳಲ್ಲಿ ಮತ್ತೊಂದು ವಿಶ್ವಕಪ್ ಬರಲಿದೆ ಎಂದು ಅಕ್ರಂ ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತವು ಫೈನಲ್‌ನಲ್ಲಿ ಮಾತ್ರ ಸೋತಿತ್ತು. ಈ ಸೋಲಿನೊಂದಿಗೆ 3ನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿತ್ತು.