ಐಪಿಎಲ್ ಶತಕ: ಗೇಲ್ ದಾಖಲೆ ಮುರಿದ ಬಟ್ಲರ್
ಹೊಸದಿಲ್ಲಿ: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ರನ್ ಮೆಷಿನ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್, ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದರು.
ಬಟ್ಲರ್ ಅವರ ಅದ್ಭುತ ಹಾಗೂ ಅಜೇಯ ಶತಕ ಅವರ ವರ್ಚಸ್ಸು ಬಿಂಬಿಸುವ ಜತೆಗೆ ತಂಡಕ್ಕೆ ಎರಡು ವಿಕೆಟ್ ಗಳ ರೋಚಕ ಜಯ ಸಾಧಿಸಲು ನೆರವಾಯಿತು. 60 ಎಸೆತಗಳಲ್ಲಿ 107 ರನ್ ಸಿಡಿಸುವ ಮೂಲಕ ಐಪಿಎಲ್ ನಲ್ಲಿ ಗರಿಷ್ಠ ರನ್ ಬೆನ್ನಟ್ಟಿ ಜಯ ಸಾಧಿಸಿದ ಕೀರ್ತಿಗೂ ತಮ್ಮ ತಂಡ ಪಾತ್ರವಾಗುವಲ್ಲಿ ನೆರವಾದರು.
ಎಂಟು ಶತಕಗಳನ್ನು ಸಿಡಿಸಿದ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಗರಿಷ್ಠ ಶತಕ ಸಾಧಿಸಿದವರಲ್ಲಿ ಅಗ್ರಗಣ್ಯರು. ಕ್ರಿಸ್ ಗೇಲ್ ಅವರ ಆರು ಶತಕಗಳ ದಾಖಲೆಯನ್ನು ಪುಡಿಗಟ್ಟಿದ ಬಟ್ಲರ್, ರೋಚಕ ಜಯದೊಂದಿಗೆ ಈ ದಾಖಲೆಯನ್ನು ಸ್ಮರಣೀಯವಾಗಿಸಿದರು.
ಈ ಅಮೋಘ ಸಾಧನೆ ಮೂಲಕ ಬಟ್ಲರ್, ಐಪಿಎಲ್ ನ ಪ್ರಿಮಿಯರ್ ಬ್ಯಾಟ್ಸ್ ಮನ್ ಎಂಬ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಇದು ಟಿ20 ಕ್ರಿಕೆಟ್ ವೇದಿಕೆಯಲ್ಲಿ ಈ ಇಂಗ್ಲೆಂಡ್ ಆಟಗಾರನ ಬ್ಯಾಟಿಂಗ್ ಸ್ಥಿರತೆ ಮತ್ತು ಪಂದ್ಯ ಗೆಲ್ಲುವ ಪ್ರದರ್ಶನವನ್ನು ಬಿಂಬಿಸಿದೆ.
ಪಂದ್ಯದುದ್ದಕ್ಕೂ ಎದುರಾಳಿ ಬೌಲರ್ ಗಳನ್ನು ನಿಬ್ಬೆರಗಾಗಿಸಿದ ಬಟ್ಲರ್, ಈ ಅಜೇಯ ಶತಕದ ಮೂಲಕ ಅಮೋಘ ಬ್ಯಾಟಿಂಗ್ ಶಕ್ತಿ, ಅಸಾಧ್ಯ ಸಮಯಗಾರಿಕೆ ಮತ್ತು ವಿಶಿಷ್ಟ ಹೊಡೆತಗಳ ಕೌಶಲವನ್ನು ಅನಾವರಣಗೊಳಿಸಿದರು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅವರು ರನ್ ಹೊಳೆಯ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದರೆ ಎದುರಾಳಿಗಳನ್ನು ಹತಾಶರನ್ನಾಗಿ ಮಾಡಿದರು.