IPL | ಅಗ್ರ ಬೌಲರ್ ಗಳ ಮಧ್ಯೆ ಪರ್ಪಲ್ ಕ್ಯಾಪ್ ಗಾಗಿ ತೀವ್ರಗೊಂಡ ಹೋರಾಟ
ಹೊಸದಿಲ್ಲಿ: ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ರವಿವಾರ ಎಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 98 ರನ್ನಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ನಂತರ ಕೆಕೆಆರ್ 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಐಪಿಎಲ್ ನ 54ನೇ ಪಂದ್ಯದಲ್ಲಿ ಕೆಕೆಆರ್ ತಂಡ ತನ್ನ ಬೌಲಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ್ದು ತಾನಾಡಿದ 11ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿದೆ. ಲಕ್ನೊ ತಂಡದ ನವೀನ್ವುಲ್ ಹಕ್ ಮೂರು ನಿರ್ಣಾಯಕ ವಿಕೆಟ್ ಗಳನ್ನು ಉರುಳಿಸಿ ಕೆಕೆಆರ್ ಗೆ ಸವಾಲೊಡ್ಡಿದ್ದರು. ರವಿ ಬಿಷ್ಣೋಯ್ ಅವರು ಸುನೀಲ್ ನರೇನ್ ಅವರ ವಿಸ್ಫೋಟಕ ಇನಿಂಗ್ಸ್ ಗೆ ತೆರೆ ಎಳೆದಿದ್ದರು.
ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಗಳನ್ನು ಕಬಳಿಸಿ ಕೆಕೆಆರ್ ಬೌಲಿಂಗ್ ದಾಳಿಯ ನೇತೃತ್ವವನ್ನು ವಹಿಸಿದರು. 2 ಓವರ್ ಸ್ಪೆಲ್ನಲ್ಲಿ ಕೇವಲ 17 ರನ್ ನೀಡಿ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಆಂಡ್ರೆ ರಸೆಲ್ ಪ್ರಭಾವಿ ಪ್ರದರ್ಶನ ನೀಡಿದರು. ಮಿಚೆಲ್ ಸ್ಟಾರ್ಕ್ ಹಾಗೂ ಸುನೀಲ್ ನರೇನ್ ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಅತ್ಯುತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಈ ವರ್ಷದ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ವರುಣ್ 11 ಇನಿಂಗ್ಸ್ ಗಳಲ್ಲಿ ಒಟ್ಟು 16 ವಿಕೆಟ್ ಗಳನ್ನು ಪಡೆದಿದ್ದಾರೆ.
ಐಪಿಎಲ್ ನ 51ನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ಗೆ 3 ವಿಕೆಟ್ ಗಳನ್ನು ಕಬಳಿಸಿದ್ದರು. ಈ ಮೂಲಕ ಒಟ್ಟು 17 ವಿಕೆಟ್ ಗಳನ್ನು ಪಡೆದಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ನ ಹರ್ಷಲ್ ಪಟೇಲ್ 3 ವಿಕೆಟ್ ಗೊಂಚಲು ಪಡೆದಿದ್ದರು. ಒಟ್ಟು 17 ವಿಕೆಟ್ ಗಳನ್ನು ಕಬಳಿಸಿ ಬುಮ್ರಾರೊಂದಿಗೆ ಸಮಬಲ ಸಾಧಿಸಿದ್ದಾರೆ.
2024ರ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ಗಾಗಿ ಸ್ಪರ್ಧೆ ತೀವ್ರಗೊಂಡಿದೆ. ಟಿ. ನಟರಾಜನ್ 8 ಪಂದ್ಯಗಳಲ್ಲಿ 15 ವಿಕೆಟ್ ಗಳನ್ನು ಕಬಳಿಸಿ 4ನೇ ಸ್ಥಾನದಲ್ಲಿದ್ದಾರೆ. ಸಿಎಸ್ಕೆ ವಿರುದ್ಧ 2 ವಿಕೆಟ್ ಪಡೆದಿರುವ ಅರ್ಷದೀಪ್ ಸಿಂಗ್ ಐಪಿಎಲ್ ಪರ್ಪಲ್ ಕ್ಯಾಪ್ ರೇಸ್ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.