ಶಿಸ್ತುಕ್ರಮದ ಕಾರಣ ಇಶಾನ್, ಶ್ರೇಯಸ್ ಅಫ್ಘಾನಿಸ್ತಾನ ವಿರುದ್ಧ ಟಿ-20 ಸರಣಿಗೆ ಆಯ್ಕೆಯಾಗಿಲ್ಲ: ವರದಿ

Update: 2024-01-10 17:07 GMT

ಹೊಸದಿಲ್ಲಿ: ಅಫ್ಘಾನಿಸ್ತಾನ ವಿರುದ್ಧ ಜನವರಿ 11ರಿಂದ ಮೊಹಾಲಿಯಲ್ಲಿ ಆರಂಭವಾಗಲಿರುವ ಟಿ-20 ಸರಣಿಯಲ್ಲಿ ವಿಕೆಟ್‌ಕೀಪರ್ ಇಶಾನ್ ಕಿಶನ್ ಹಾಗೂ ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯು ಎದ್ದು ಕಾಣುತ್ತಿದೆ.

ಈ ಇಬ್ಬರನ್ನು ಟಿ-20 ಸರಣಿಗೆ ಆಯ್ಕೆ ಮಾಡದೇ ಇರುವುದು ಹಲವರನ್ನು ಅಚ್ಚರಿಗೊಳಿಸಿತ್ತು. ಟಿ-20 ತಂಡ ಪ್ರಕಟವಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹ ಹರಡಿತ್ತು.

ಟಿ-20 ತಂಡದಿಂದ ಹೊರಗುಳಿಯುವ ಮುಂಚೆ ಇಶಾನ್ ವೈಯಕ್ತಿಕ ಕಾರಣವನ್ನು ಉಲ್ಲೇಖಿಸಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಗುಳಿದ್ದರು. ಶ್ರೇಯಸ್ ಟೆಸ್ಟ್ ಸರಣಿಯ 4 ಇನಿಂಗ್ಸ್‌ಗಳಲ್ಲಿ ಕೇವಲ 41 ರನ್ ಗಳಿಸಿ ಘೋರ ವೈಫಲ್ಯ ಕಂಡಿದ್ದರು.

ಬಂಗಾಳದ ದಿನಪತ್ರಿಕೆ ಆನಂದ್ ಬಝಾರ್ ಪತ್ರಿಕೆಯಲ್ಲಿ ಬಂದಿರುವ ವರದಿಯ ಪ್ರಕಾರ ಶಿಸ್ತುಕ್ರಮದ ಕಾರಣಕ್ಕೆ ಇಶಾನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಅಫ್ಘಾನಿಸ್ತಾನದ ವಿರುದ್ಧದ ಟಿ-20 ಸರಣಿಯಿಂದ ಹೊರಗಿಡಲಾಗಿದೆ.ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದ ಇಶಾನ್ ದುಬೈನಲ್ಲಿ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಆಯ್ಕೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.ಆ ನಂತರ ಇಶಾನ್ ಜನಪ್ರಿಯ ಟಿವಿ ಕ್ವಿಝ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇಶಾನ್ ಅವರ ವರ್ತನೆಯು ಟಿ-20 ವಿಶ್ವಕಪ್ ತಂಡದಿಂದ ಹೊರಗುಳಿಯುವಂತೆ ಮಾಡಿರಬಹುದು ಎಂದು ವರದಿ ತಿಳಿಸಿದೆ.

ಮತ್ತೊಂದೆಡೆ ಆಯ್ಕೆಗಾರರು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ವೇಳೆ ಶ್ರೇಯಸ್ ಅವರ ಹೊಡೆತದ ಆಯ್ಕೆಯ ಬಗ್ಗೆ ಬೇಸರಗೊಂಡಿದ್ದಾರೆ. ಸ್ವದೇಶಕ್ಕೆ ವಾಪಸಾದ ನಂತರ ಮುಂಬೈ ರಣಜಿ ಟ್ರೋಫಿಯಲ್ಲಿ ಶ್ರೇಯಸ್ ಆಡಬೇಕೆಂದು ಅವರು ಬಯಸಿದ್ದರು. ಆದರೆ 29ರ ಹರೆಯದ ಶ್ರೇಯಸ್ ತನಗೆ ವಿಶ್ರಾಂತಿ ಬೇಕೆಂದು ಕೇಳಿದ್ದಾರೆ. ಶ್ರೇಯಸ್ ಬೇಡಿಕೆಯು ಆಯ್ಕೆಗಾರರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರನ್ನು ಅಫ್ಘಾನಿಸ್ತಾನ ವಿರುದ್ಧ ಸರಣಿಯಿಂದ ಕೈಬಿಟ್ಟಿದ್ದಾರೆ. ಶ್ರೇಯಸ್ ನಂತರ ತಾನು ಆಯ್ಕೆಗೆ ಲಭ್ಯವಿದ್ದೇನೆ ಎಂದು ಹೇಳಿದ್ದು, ಅವರನ್ನು ಜ.12ರಿಂದ ಆರಂಭವಾಗುವ ಆಂಧ್ರಪ್ರದೇಶ ವಿರುದ್ದದ ರಣಜಿ ಪಂದ್ಯಕ್ಕೆ ಮುಂಬೈ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟನ್ನು ಗಂಭೀರವಾಗಿ ತೆಗೆದುಕೊಳ್ಳದ ಆಟಗಾರರ ವಿರುದ್ಧ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News