ಬಿಸಿಸಿಐ ಕಾರ್ಯಕ್ರಮದಂತೆ ಕಂಡುಬಂತು: ಭಾರತ-ಪಾಕ್ ಪಂದ್ಯದ ಬಗ್ಗೆ ಪಾಕ್ ತಂಡ ನಿರ್ದೇಶಕ ಹೇಳಿಕೆ

Update: 2023-10-15 18:39 GMT

ಅಹ್ಮದಾಬಾದ್, ಅ. 15: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ವಿಶ್ವಕಪ್ ಪಂದ್ಯವು ರೋಮಾಂಚಕವಾಗಿರಬಹುದು ಎಂಬ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿತ್ತಾದರೂ ಅದು ನೀರಸವಾಗಿ ಕೊನೆಗೊಂಡಿತು. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಸುಲಭ ಜಯ ಗಳಿಸಿತು.

ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಸೇರಿದಂತೆ ಭಾರತದ ಐವರು ಬೌಲರ್ಗಳು ತಲಾ ಎರಡು ವಿಕೆಟ್ಗಳನ್ನು ಪಡೆದರು. ಅಂತಿಮವಾಗಿ ಭಾರತವು ಪಾಕಿಸ್ತಾನವನ್ನು ಏಳು ವಿಕೆಟ್ಗಳಿಂದ ಭರ್ಜರಿಯಾಗಿ ಸೋಲಿಸಿತು.

ಈ ಪಂದ್ಯವನ್ನು ವೀಕ್ಷಿಸಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರತೀಯ ಕ್ರಿಕೆಟಿಗರ ಜರ್ಸಿಯನ್ನು ಹೋಲುವ ನೀಲಿ ಬಣ್ಣದ ಜರ್ಸಿಗಳನ್ನು ಧರಿಸಿ ಬಂದಿದ್ದರು. ಎಲ್ಲಿ ನೋಡಿದರೂ ನೀಲಿ ಬಣ್ಣದ ಜರ್ಸಿಗಳು. ಅದು ನೀಲಿ ಸಾಗರದಂತಿತ್ತು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್, ಪಕ್ಷಪಾತಿ ವಾತಾವರಣವಿರುವ ಸ್ಟೇಡಿಯಮ್ ಒಂದರಲ್ಲಿ ಆಡುವುದು ಎದುರಾಳಿ ತಂಡಗಳಿಗೆ ಕಷ್ಟ ಎಂದು ಹೇಳಿದ್ದಾರೆ. ‘‘ಅದು ಬಿಸಿಸಿಐಯ ಕಾರ್ಯಕ್ರಮವೇನೋ ಎಂಬ ಭಾವನೆಯನ್ನು ಹುಟ್ಟುಹಾಕಿತು’’ ಎಂದು ಅವರು ಹೇಳಿಕೊಂಡಿದ್ದಾರೆ.

‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಐಸಿಸಿಯ ಕಾರ್ಯಕ್ರಮದಂತಿರಲಿಲ್ಲ. ಬಿಸಿಸಿಐಯ ಕಾರ್ಯಕ್ರಮದಂತಿತ್ತು ಎಂದು ನಾನು ಹೇಳಿದರೆ ನಾನು ಸುಳ್ಳು ಹೇಳಿದ ಹಾಗೆ ಆಗಬಹುದು. ಅದು ದ್ವಿಪಕ್ಷೀಯ ಸರಣಿಯಂತೆ ನನಗೆ ಅನಿಸಿತು. ಅದು ಬಿಸಿಸಿಐ ನಡೆಸಿಕೊಡುವ ಪಂದ್ಯದಂತೆ ಅನಿಸಿತು. ಮೈಕ್ರೋಫೋನ್ಗಳಲ್ಲಿ ‘ದಿಲ್ ದಿಲ್ ಪಾಕಿಸ್ತಾನ್’ ಎಂಬ ಘೋಷಣೆಗಳು ಹೆಚ್ಚಾಗಿ ಕೇಳಿಬರಲಿಲ್ಲ’’ ಎಂದು ಆರ್ಥರ್ ಹೇಳಿದರು.

ಆದಾಗ್ಯೂ, ಭಾರತದ ಕೈಯಲ್ಲಿ ಪಾಕಿಸ್ತಾನ ಅನುಭವಿಸಿದ ಬೃಹತ್ ಸೋಲಿಗೆ ಪ್ರೇಕ್ಷಕರ ಕೊರತೆಯನ್ನು ನೆಪವಾಗಿ ಬಳಸಲು ಸಾಧ್ಯವಿಲ್ಲ ಎಂಬುದಾಗಿಯೂ ಅವರು ಹೇಳಿದರು.

‘‘ಹೌದು, ಪ್ರೇಕ್ಷಕರ ಬೆಂಬಲದ ಕೊರತೆಯೂ ತಂಡವೊಂದರ ಸೋಲಿನಲ್ಲಿ ಪಾತ್ರ ವಹಿಸುತ್ತದೆ. ಆದರೆ, ನಾನು ಅದನ್ನು ನೆಪವಾಗಿ ಬಳಸುವುದಿಲ್ಲ’’ ಎಂದರು.

‘‘ನಮ್ಮ ಒಟ್ಟಾರೆ ನಿರ್ವಹಣೆಯಿಂದ ನಮಗೆ ಕೊಂಚ ಹಿಂಜರಿಕೆಯಾಗಿದೆ.

ಇದಕ್ಕಿಂತ ಸ್ವಲ್ಪ ಉತ್ತಮವಾಗಿ ನಾವು ಆಡಬಹುದಾಗಿತ್ತು. ಇದೊಂದು ದೊಡ್ಡ ಅವಕಾಶ. ಆದರೆ, ನಾವು ನಮ್ಮ ಚಿಪ್ಪಿನಿಂದ ಹೊರಗೆ ಬರಲಿಲ್ಲ’’ ಎಂದು ಆರ್ಥರ್ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News