ದೇಶೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ಮೈಲಿಗಲ್ಲು : ಇತಿಹಾಸ ನಿರ್ಮಿಸಿದ ಜಲಜ್ ಸಕ್ಸೇನ

Update: 2024-11-06 16:42 GMT

 ಜಲಜ್ ಸಕ್ಸೇನ | PC : X \ @jalajsaxena33

ಕೊಚ್ಚಿ : ಕೇರಳದ ಆಲ್‌ರೌಂಡರ್ ಜಲಜ್ ಸಕ್ಸೇನ ರಣಜಿ ಕ್ರಿಕೆಟ್ ಚರಿತ್ರೆಯಲ್ಲಿ 6,000 ರನ್ ಹಾಗೂ 400 ವಿಕೆಟ್‌ ಗಳನ್ನು ಕಬಳಿಸಿ ಡಬಲ್ ಸಾಧನೆಗೈದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.

ಸೈಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ಉತ್ತರಪ್ರದೇಶ ವಿರುದ್ಧ ಬುಧವಾರ ಆರಂಭವಾದ ಸಿ ಗುಂಪಿನ 4ನೇ ಸುತ್ತಿನ ಪಂದ್ಯದಲ್ಲಿ ಸಕ್ಸೇನ ಈ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದರು.

ಕೇರಳ ತಂಡ ಕೋಲ್ಕತಾದಲ್ಲಿ ಆಡಿರುವ ಹಿಂದಿನ ಪಂದ್ಯದಲ್ಲಿ ಸಕ್ಸೇನ 6,000 ರನ್ ಕ್ರಮಿಸಿದ್ದರು. ಇಂದು ತನ್ನ ಸ್ಪಿನ್ ಬೌಲಿಂಗ್ ಮೂಲಕ ಎಡಗೈ ಬ್ಯಾಟರ್ ನಿತಿಶ್ ರಾಣಾ ವಿಕೆಟನ್ನು ಉರುಳಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು.

37ರ ಹರೆಯದ ಸಕ್ಸೇನ ರಣಜಿ ಟ್ರೋಫಿ ಇತಿಹಾಸದಲ್ಲಿ 400 ವಿಕೆಟ್ ಪೂರ್ಣಗೊಳಿಸಿದ 13ನೇ ಬೌಲರ್ ಎನಿಸಿಕೊಂಡಿದ್ದಾರೆ. ರಣಜಿ ಟ್ರೋಫಿಯಲ್ಲಿ ತನ್ನ 29ನೇ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ 400ನೇ ವಿಕೆಟ್ ಪೂರೈಸಿದರು.

ಸಕ್ಸೇನ 2005ರಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುವುದರೊಂದಿಗೆ ತನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದರು. 11 ವರ್ಷಗಳ ಕಾಲ ಮಧ್ಯಪ್ರದೇಶ ತಂಡದ ಪರ ಆಡಿದ್ದ ಸಕ್ಸೇನ 4,040 ರನ್ ಹಾಗೂ 159 ವಿಕೆಟ್‌ ಗಳನ್ನು ಪಡೆದಿದ್ದರು.

2016-17ರ ಋತುವಿನಲ್ಲಿ ಕೇರಳ ತಂಡವನ್ನು ಸೇರಿದ ಸಕ್ಸೇನ ಆ ತಂಡದ ಪರ 2ನೇ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು.

ಕಳೆದ ಋತುವಿನಲ್ಲಿ ಸಕ್ಸೇನ ಅವರು ಭಾರತದ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 9,000 ರನ್ ಹಾಗೂ 600 ವಿಕೆಟ್ ಪಡೆದಿರುವ 4ನೇ ಆಟಗಾರ ಎನಿಸಿಕೊಂಡಿದ್ದರು. ಇದರೊಂದಿಗೆ ವಿನೂ ಮಂಕಡ್, ಮದನ್ ಲಾಲ್ ಹಾಗೂ ಪರ್ವೇಝ್ ರಸೂಲ್ ಅವರನ್ನೊಳಗೊಂಡ ಲೆಜೆಂಡ್‌ಗಳ ಪಟ್ಟಿಗೆ ಸೇರಿದ್ದರು.

ರಣಜಿ ಟ್ರೋಫಿಯೊಂದರಲ್ಲೇ ಜಲಜ್ ಸಕ್ಸೇನ ಅವರ ದಾಖಲೆ ಸಕ್ರಿಯ ಆಲ್‌ರೌಂಡರ್‌ಗಳಲ್ಲಿ ಅತ್ಯಂತ ಶ್ರೇಷ್ಠವಾಗಿದ್ದು, ಇದಕ್ಕೆ ಯಾರೂ ಸರಿಸಾಟಿ ಇಲ್ಲವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News