ಸೂಪರ್ ಫೆದರ್ವೇಟ್ ಪ್ರಶಸ್ತಿ ಜಯಿಸಿದ ಭಾರತದ ಬಾಕ್ಸರ್ ಮನ್ದೀಪ್ ಜಾಂಗ್ರಾ
ಹೊಸದಿಲ್ಲಿ : ಭಾರತದ ವೃತ್ತಿಪರ ಬಾಕ್ಸರ್ ಮನ್ದೀಪ್ ಜಾಂಗ್ರಾ ಬ್ರಿಟನ್ ನ ಕೊನೊರ್ ಮೆಕಿಂಟೋಶ್ರ ನ್ನು ಮಣಿಸಿದ ನಂತರ ವಿಶ್ವ ಬಾಕ್ಸಿಂಗ್ ಫೆಡರೇಶನ್ನ ಸೂಪರ್ ಫೆದರ್ವೇಟ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ರಾಯ್ ಜೋನ್ಸ್ ಜೂನಿಯರ್ ಅವರಿಂದ ತರಬೇತಿ ಪಡೆದಿರುವ 31 ವರ್ಷದ ಮನ್ದೀಪ್ ಅವರು ತನ್ನ ವೃತ್ತಿಪರ ಜೀವನದಲ್ಲಿ ಈ ತನಕ ಒಂದೇ ಒಂದು ಸೋಲು ಕಂಡಿಲ್ಲ. ಹೆಚ್ಚಿನ ಸುತ್ತುಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.
ಬ್ರಿಟನ್ ಬಾಕ್ಸರ್ಗೆ ಆರಂಭದಿಂದಲೂ ಪ್ರಬಲ ಪಂಚ್ ಗಳನ್ನು ನೀಡಿರುವ ಮನ್ದೀಪ್ 10 ಸುತ್ತುಗಳ ಉದ್ದಕ್ಕೂ ತನ್ನ ಶಕ್ತಿಯನ್ನು ಉಳಿಸಿಕೊಂಡರು. ಆದರೆ ಬ್ರಿಟನ್ ಬಾಕ್ಸರ್ ತನ್ನ ವೇಗವನ್ನು ಉಳಿಸಿಕೊಳ್ಳಲು ಹೆಣಗಾಡಿದರು.
ಕೊನೊರ್ ಮರಳಿ ಹೋರಾಟ ನೀಡಲು ಯತ್ನಿಸಿದರು. ಆದರೆ ಮನ್ದೀಪ್ ಹೆಚ್ಚಿನ ಸುತ್ತುಗಳಲ್ಲಿ ಮೇಲುಗೈ ಉಳಿಸಿಕೊಂಡರು.
ಇದು ನನ್ನ ವೃತ್ತಿಜೀವನದ ಅತಿ ದೊಡ್ಡ ಗೆಲುವು. ಇದನ್ನು ಸಾಧಿಸಲು ನಾನು ಹಲವು ವರ್ಷಗಳಿಂದ ಕಠಿಣ ಶ್ರಮಪಟ್ಟಿದ್ದೇನೆ. ಇದು ನನ್ನ ಪಾಲಿಗೆ ಹೆಮ್ಮೆಯ ವಿಷಯ. ನಾನು ದೇಶಕ್ಕೆ ಗೌರವ ತಂದುಕೊಟ್ಟಿದ್ದೆೇನೆ ಎಂದು ಮಾಧ್ಯಮ ಹೇಳಿಕೆಯೊಂದರಲ್ಲಿ ಮನ್ದೀಪ್ ತಿಳಿಸಿದ್ದಾರೆ.
ಹರ್ಯಾಣದ ಬಾಕ್ಸರ್ ಮನ್ದೀಪ್ 2021ರಲ್ಲಿ ತನ್ನ ವೃತ್ತಿಪರ ಬಾಕ್ಸಿಂಗ್ಗೆ ಕಾಲಿಟ್ಟಿದ್ದರು.
ಈ ಪ್ರಶಸ್ತ್ತಿಯು ಭಾರತದ ಇತರ ಬಾಕ್ಸರ್ಗಳು ವೃತ್ತಿಪರ ಬಾಕ್ಸಿಂಗ್ಗೆ ಪ್ರವೇಶಿಸಲು ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದೇನೆ. ನಮ್ಮ ಬಾಕ್ಸರ್ಗಳು ಉತ್ತಮವಾಗಿದ್ದು, ಯಾರಲ್ಲೂ ಪ್ರತಿಭೆಯ ಕೊರತೆ ಇಲ್ಲ. ಅವರು ಉತ್ತಮ ಪ್ರಮೋಟರ್ಗಳು ಹಾಗೂ ಮ್ಯಾನೇಜರ್ಗಳನ್ನು ಪಡೆದರೆ, ವಿಶ್ವ ಚಾಂಪಿಯನ್ಗಳಾಗಬಹುದು ಎಂದು ಮನ್ದೀಪ್ ಹೇಳಿದ್ದಾರೆ.
ಮನ್ದೀಪ್ ತನ್ನ ವೃತ್ತಿಪರ ಬಾಕ್ಸಿಂಗ್ ನಲ್ಲಿ 12 ಫೈಟ್ಗಳಲ್ಲಿ 11ರಲ್ಲಿ ಜಯ ಸಾಧಿಸಿದ್ದು, ನಾಕೌಟ್ ಹಂತದಲ್ಲಿ 7 ಬಾರಿ ಜಯಶಾಲಿಯಾಗಿದ್ದಾರೆ.
ಹವ್ಯಾಸಿ ಬಾಕ್ಸರ್ ಆಗಿದ್ದಾಗ 2014ರ ಗ್ಲಾಸ್ಗೊ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.