2036ರ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಆತಿಥ್ಯಕ್ಕೆ ಐಒಸಿಗೆ ಪತ್ರ ಸಲ್ಲಿಸಿದ ಭಾರತ : ವರದಿ

Update: 2024-11-10 14:03 GMT
Editor : Ismail | Byline : Saleeth Sufiyan

PC : olympics.com

ಹೊಸದಿಲ್ಲಿ : 2036ರ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಸಮರ್ಥವಾಗಿ ಆಯೋಜಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ)ಅಕ್ಟೋಬರ್ 1ರಂದು ಅಧಿಕೃತವಾಗಿ ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(ಐಒಸಿ)ಭವಿಷ್ಯದ ಆತಿಥೇಯ ಆಯೋಗಕ್ಕೆ ಪತ್ರವನ್ನು ಸಲ್ಲಿಸಿದೆ ಎಂದು ಮೂಲಗಳು ಸುದ್ದಿಸಂಸ್ಥೆ ಐಒಎನ್ಎಸ್ಗೆ ತಿಳಿಸಿವೆ.

2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳನ್ನು ಆಯೋಜಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನವನ್ನು ಹೊಂದಿದ್ದು, ಇದೀಗ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಈ ಸ್ಮರಣೀಯ ಅವಕಾಶವು ಗಣನೀಯ ಪ್ರಯೋಜನಗಳನ್ನು ತರಬಹುದು. ದೇಶದಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಹಾಗೂ ಯುವ ಸಬಲೀಕರಣವನ್ನು ಉತ್ತೇಜಿಸಲಿದೆ.

ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಸೇರಿದಂತೆ ಭಾರತದ ಪ್ರಮುಖ ಕ್ರೀಡಾ ಆಡಳಿತಾಧಿಕಾರಿಗಳು ವರ್ಷದ ಆರಂಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೇಶದ ಆಯ್ಕೆಗಾಗಿ ಲಾಬಿ ನಡೆಸಿದ್ದರು. ಬಿಡ್ ಯಶಸ್ವಿಯಾದರೆ, ಯೋಗ, ಖೋ ಖೋ ಹಾಗೂ ಕಬಡ್ಡಿಯಂತಹ ದೇಶಿಯ ಸ್ಪರ್ಧೆಗಳನ್ನು ಸೇರಿಸಲು ಭಾರತ ಒತ್ತಾಯಿಸಲಿದೆ ಎಂದು ವರದಿ ತಿಳಿಸಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ಸ್ ಸೆಲ್ (ಎಂಒಸಿ)ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಯಶಸ್ವಿ ಬಿಡ್ಗೆ ಅಗತ್ಯವಾದ ಕ್ರಮಗಳ ಕುರಿತು ವರದಿಯೊಂದನ್ನು ಸಲ್ಲಿಸಿದೆ.

ಪ್ರಧಾನಿ ಮೋದಿ ಈ ಹಿಂದೆ ಭಾರತಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟದ ಮಹತ್ವವನ್ನು ಒತ್ತಿ ಹೇಳಿದ್ದರು. ಸ್ವಾತಂತ್ರ್ಯ ದಿನದಂದು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ಅವರು ಒಲಿಂಪಿಕ್ಸ್ ಆಯೋಜಿಸುವ ಸಿದ್ಧತೆಗೆ ಕ್ರೀಡಾಪಟುಗಳಿಂದ ಸಲಹೆಯನ್ನು ಕೇಳಿದ್ದರು.

ಭಾರತವು 2036ರ ಒಲಿಂಪಿಕ್ಸ್ಗೆ ಆತಿಥ್ಯವಹಿಸಲು ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಹಿಂದಿನ ಒಲಿಂಪಿಕ್ಸ್ನಲ್ಲಿ ಆಡಿದ ಕ್ರೀಡಾಪಟುಗಳ ಸಲಹೆಗಳು ಅತ್ಯಂತ ಮುಖ್ಯವಾಗಿದೆ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿ ಅನುಭವಿಸಿರಬಹುದು. ನಾವು ಅದನ್ನು ದಾಖಲಿಸಲು ಹಾಗೂ ಅದನ್ನು ಸರಕಾರದೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. 2036ರ ಒಲಿಂಪಿಕ್ಸ್ ತಯಾರಿಗೆ ನಾವು ಯಾವುದೇ ಚಿಕ್ಕ ವಿವರಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2036ರಲ್ಲಿ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸುವ ನಮ್ಮ ಪ್ರಯತ್ನದಲ್ಲಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಇದು 140 ಕೋಟಿ ಭಾರತೀಯರ ಬಹುಕಾಲದ ಕನಸು ಹಾಗೂ ಆಕಾಂಕ್ಷೆಯಾಗಿದೆ. ಈ ಕನಸು ನಿಮ್ಮ ಸಹಕಾರ ಹಾಗೂ ಬೆಂಬಲದೊಂದಿಗೆ ಆಗಬೇಕಾಗಿದೆ ಎಂದು ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ 141ನೇ ಐಒಸಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

2036ರ ಒಲಿಂಪಿಕ್ಸ್ಗೆ ಆತಿಥ್ಯವಹಿಸಲು ತಯಾರಿ ನಡೆಸುತ್ತಿರುವ ಭಾರತಕ್ಕೆ ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಸಂಪೂರ್ಣ ಬೆಂಬಲಿಸಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತಕ್ಕೆ ಸಾಮರ್ಥ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದರು.

2036ರ ಒಲಿಂಪಿಕ್ ಗೇಮ್ಸ್ ಆಯೋಜನೆಗೆ ಭಾರತ ಮಾತ್ರವಲ್ಲ ಇತರ 9 ದೇಶಗಳು ಆಸಕ್ತಿ ವ್ಯಕ್ತಪಡಿಸಿವೆ. 2036ರ ಗೇಮ್ಸ್ ಆಯೋಜನೆಗೆ ಮೆಕ್ಸಿಕೋ(ಮೆಕ್ಸಿಕೋ ಸಿಟಿ), ಇಂಡೋನೇಶ್ಯ(ನುಸಂತಾರಾ), ಟರ್ಕಿ(ಇಸ್ತಾಂಬುಲ್), ಭಾರತ(ಅಹಮದಾಬಾದ್), ಪೋಲ್ಯಾಂಡ್(ವಾರ್ಸಾ, ಕ್ರಾಕೋವ್), ಈಜಿಪ್ಟ್ ಹಾಗೂ ದಕ್ಷಿಣ ಕೊರಿಯಾ(ಸಿಯೋಲ್-ಇಂಚಿಯಾನ್)ಸಹಿತ 10 ದೇಶಗಳು ಆರಂಭಿಕ ಆಸಕ್ತಿಯನ್ನು ತೋರಿಸಿವೆ.

ಐಒಸಿಯ ಫ್ಯೂಚರ್ ಹೋಸ್ಟ್ ಕಮಿಶನ್ ಆಯ್ಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸುತ್ತದೆ. ಇದು ಪ್ರತಿ ಸಂಭಾವ್ಯ ಅತಿಥೇಯ ದೇಶಗಳ ವಿವರವಾದ ಮೌಲ್ಯಮಾಪನವನ್ನು ಹೊಂದಿರುತ್ತದೆ. ಆತಿಥೇಯ ನಗರದ ಕುರಿತು ಅಂತಿಮ ನಿರ್ಧಾರ ಹಲವು ವರ್ಷಗಳ ನಂತರ ನಿರ್ಧಾರವಾಗುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - Saleeth Sufiyan

contributor

Similar News