ಧೋನಿ ಶ್ರೇಷ್ಠ ನಾಯಕ : ಪಾಕ್ ಕ್ರಿಕೆಟಿಗ ಸಾಜಿದ್ ಖಾನ್

Update: 2024-11-06 16:23 GMT

ಹೊಸದಿಲ್ಲಿ : ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಸಾಜಿದ್ ಖಾನ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವ ಗುಣಗಳನ್ನು ಶ್ಲಾಘಿಸಿದ್ದಾರೆ.

‘‘ಶ್ರೇಷ್ಠ ನಾಯಕ ಎಮ್.ಎಸ್. ಧೋನಿ. ಅವರು ಯಾವಾಗಲೂ ಅತ್ಯಂತ ತಣ್ಣಗೆ ಮತ್ತು ಶಾಂತವಾಗಿರುತ್ತಾರೆ. ಅವರು ಯಶಸ್ವಿ ನಾಯಕನೂ ಹೌದು’’ ಎಂದು ಸ್ಪಿನ್ನರ್ ಸಾಜಿದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಯಶಸ್ಸಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ, ಇಡೀ ಜಗತ್ತಿನಲ್ಲಿ ನಿಮಗೆ ಸ್ಫೂರ್ತಿ ನೀಡುವವರು ಯಾರು ಎಂಬುದಾಗಿ ನಿರೂಪಕರು ಕೇಳಿದ ಪ್ರಶ್ನೆಗೆ ಅವರು ನೀಡಿರುವ ಉತ್ತರ ವೀಡಿಯೊ ವೈರಲ್ ಆಗಿದೆ.

ಚಾಣಾಕ್ಷ ಕ್ರಿಕೆಟ್ ನಾಯಕತ್ವಕ್ಕೆ, ಅದರಲ್ಲೂ ಮುಖ್ಯವಾಗಿ ಅತ್ಯಂತ ಒತ್ತಡದ ಸಂದರ್ಭಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಧೋನಿ ಖ್ಯಾತರಾಗಿದ್ದಾರೆ.

ಎಲ್ಲಾ ಮೂರು ಮಹತ್ವದ ಐಸಿಸಿ ಪಂದ್ಯಾವಳಿಗಳಲ್ಲಿ ಧೋನಿ ಭಾರತೀಯ ತಂಡವನ್ನು ವಿಜಯದತ್ತ ಮುನ್ನಡೆಸಿದ್ದಾರೆ- 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ. ಅವರು ಈ ಸಾಧನೆಯನ್ನು ಮಾಡಿದ ಏಕೈಕ ನಾಯಕನಾಗಿದ್ದಾರೆ.

ಶಾಂತವಾಗಿ ಇರುವ ಸಾಮರ್ಥ್ಯ, ಕ್ರೀಡೆಯ ಬಗ್ಗೆ ಅಗಾಧ ಜ್ಞಾನ, ಆಟಗಾರರನ್ನು ನಿಭಾಯಿಸುವ ಕೌಶಲ್ಯ ಅವರನ್ನು ಯಶಸ್ವಿ ನಾಯಕನಾಗಿ ಮಾಡಿವೆ.

2021ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಸಾಜಿದ್, ಶಿಸ್ತಿನ ಲೈನ್ ಮತ್ತು ಲೆಂತ್ ಹಾಗೂ ಬೌನ್ಸ್‌ಗೆ ಪ್ರಸಿದ್ಧಿಯಾಗಿದ್ದಾರೆ. ಮುಲ್ತಾನ್ ಮತ್ತು ರಾವಲ್ಪಿಂಡಿಗಳಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡು ಕೊನೆಯ ಟೆಸ್ಟ್‌ಗಳಲ್ಲಿ ಅವರು ಒಟ್ಟು 19 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಕೊಡುಗೆಯ ನೆರವಿನಿಂದ ಪಾಕಿಸ್ತಾನವು ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News