ಏಕದಿನ, ಟೆಸ್ಟ್ ತಂಡದ ನಾಯಕ ಯಾರು?: ಚರ್ಚೆಗಳಿಗೆ ತೆರೆ ಎಳೆದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಜಯಿಸಿದ ಬೆನ್ನಿಗೇ ಮುಂದಿನ ಏಕದಿನ, ಟೆಸ್ಟ್ ತಂಡದ ನಾಯಕ ಯಾರು ಎಂಬ ಚರ್ಚೆಗಳು ಗರಿಗೆದರಿದ್ದವು. ಹಲವರು ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯ ಸುತ್ತ ತಮ್ಮ ಚರ್ಚೆಗಳನ್ನು ಕೇಂದ್ರೀಕರಿಸಿದ್ದರು. ಸದ್ಯ ಈ ಎಲ್ಲ ಚರ್ಚೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯ ಕಾರ್ಯದರ್ಶಿ ಜಯ್ ಶಾ ತೆರೆ ಎಳೆದಿದ್ದಾರೆ.
ತಮ್ಮ ವಿಡಿಯೊ ಸಂದೇಶದಲ್ಲಿ ಟಿ-20 ವಿಶ್ವಕಪ್ ಜಯಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿರುವ ಜಯ್ ಶಾ, ನಮ್ಮ ಮುಂದಿನ ಗುರಿ ವಿಶ್ವ ಟೆಸ್ಟ್ ಕ್ರಿಕೆಟ್ ಫೈನಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಆಗಿದೆ ಎಂದೂ ಹೇಳಿದ್ದಾರೆ.
“ಈ ಗೆಲುವಿನ ನಂತರ ನಮ್ಮ ಮುಂದಿನ ಹಂತವು 2025ರಲ್ಲಿ ನಡೆಯಲಿರುವ ವಿಶ್ವೆ ಟೆಸ್ಟ್ ಕ್ರಿಕೆಟ್ ಫೈನಲ್ ಹಾಗೂ ಚಾಂಪಿಯನ್ಸ್ ಟ್ರೋಫಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾವು ಈ ಎರಡೂ ಕ್ರೀಡಾಕೂಟಗಳನ್ನು ಜಯಿಸಲಿದ್ದೇವೆ ಎಂದು ನಾನು ನಿಜಕ್ಕೂ ನಂಬಿದ್ದೇನೆ” ಎಂದು ಜಯ್ ಶಾ ತಮ್ಮ ವಿಡಿಯೊ ಸಂದೇಶದಲ್ಲಿ ಹೇಳುವ ಮೂಲಕ ಭಾರತ ಏಕದಿನ ತಂಡದ ನಾಯಕತ್ವದ ಕುರಿತು ಗರಿಗೆದರಿದ್ದ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
17 ವರ್ಷಗಳ ನಂತರ ವಿಶ್ವಕಪ್ ಟ್ರೋಫಿ ಹಾಗೂ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಜಯಿಸಿರುವ ಭಾರತೀಯ ಕ್ರಿಕೆಟ್ ತಂಡವು ಗುರುವಾರದಂದು ಸ್ವದೇಶಕ್ಕೆ ಮರಳಿತು. ವಿಜೇತ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ನಾರಿಮನ್ ಪಾಯಿಂಟ್ ನಿಂದ ವಾಂಖೆಡೆ ಕ್ರೀಡಾಂಗಣದವರೆಗೂ ನಡೆದ ಗೆಲುವಿನ ಮೆರವಣಿಗೆಯಲ್ಲಿ ಭಾರಿ ಪ್ರಮಾಣದ ಅಭಿಮಾನಿಗಳು ನೆರೆದ್ದರು.
ಈ ನಡುವೆ, ಟಿ-20 ವಿಶ್ವಕಪ್ ಜಯಿಸಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರೂ. 125 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.