36 ವರ್ಷ ಬಳಿಕ ಭಾರತದಲ್ಲಿ ಮೊದಲ ಟೆಸ್ಟ್ ಗೆದ್ದ ಕಿವೀಸ್!

Update: 2024-10-20 15:50 GMT

PC : PTI 

ಬೆಂಗಳೂರು : ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಪ್ರವಾಸಿ ನ್ಯೂಝಿಲ್ಯಾಂಡ್ ರವಿವಾರ ಭರ್ಜರಿ 8 ವಿಕೆಟ್‌ ಗಳಿಂದ ಗೆದ್ದಿದೆ. ನ್ಯೂಝಿಲ್ಯಾಂಡ್ ತಂಡವು 36 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದಿದ್ದು, ಇತಿಹಾಸ ಸೃಷ್ಟಿಸಿದೆ.

ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆದ ಪಂದ್ಯದ ಐದನೇ ದಿನ, ಗೆಲ್ಲಲು 107 ರನ್‌ ಗಳ ಗುರಿಯನ್ನು ಪಡೆದ ನ್ಯೂಝಿಲ್ಯಾಂಡ್, 27.4 ಓವರ್‌ ಗಳಲ್ಲಿ 2 ವಿಕೆಟ್‌ ಗಳನ್ನು ಕಳೆದುಕೊಂಡು 110 ರನ್‌ ಗಳನ್ನು ಗಳಿಸಿತು.

ಪಂದ್ಯದ ಅಂತಿಮ ದಿನದ ಆಟವು ಮಳೆಯಿಂದಾಗಿ ವಿಳಂಬವಾಗಿ ಆರಂಭಗೊಂಡಿತು. ಭಾರತದ ವೇಗಿ ಜಸ್ಪ್ರೀತ್ ಬುಮ್ರಾರ ಆರಂಭಿಕ ಸುತ್ತಿನ ಮಾರಕ ಬೌಲಿಂಗ್ ವೇಳೆ ನ್ಯೂಝಿಲ್ಯಾಂಡ್ ಬ್ಯಾಟರ್‌ ಗಳು ರನ್ ಗಳಿಸಲು ಪರದಾಡಿದರು. ಬುಮ್ರಾ ಆರಂಭದಲ್ಲೇ ಎರಡು ವಿಕೆಟ್‌ ಗಳನ್ನು ಉರುಳಿಸಿದಾಗ ಭಾರತೀಯ ಪ್ರೇಕ್ಷಕರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಭಾರತದ ಅಸಾಧ್ಯ ಜಯದ ಕಲ್ಪನೆಯೊಂದು ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆಯನ್ನು ಆರಂಭದಲ್ಲಿ ಬುಮ್ರಾ ಅಭಿಮಾನಿಗಳಲ್ಲಿ ಮೂಡಿಸಿದ್ದರು.

ಆದರೆ, ನ್ಯೂಝಿಲ್ಯಾಂಡ್ ಬ್ಯಾಟರ್‌ ಗಳಾದ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಭಾರತೀಯ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಗಾಯಾಳು ಕೇನ್ ವಿಲಿಯಮ್ಸನ್ ಸ್ಥಾನದಲ್ಲಿ ಆಡಲು ಬಂದ ಯಂಗ್ 76 ಎಸೆತಗಳಲ್ಲಿ ಅಮೋಘ 48 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರಿಗೆ ರಚಿನ್ ರವೀಂದ್ರ ಸಮರ್ಥ ಬೆಂಬಲ ನೀಡಿದರು. ರಚಿನ್ 46 ಎಸೆತಗಳಲ್ಲಿ 39 ರನ್ ಸಿಡಿಸಿ ಔಟಾಗದೆ ಉಳಿದರು.

ಇದರೊಂದಿಗೆ, ಕಳೆದ 10 ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಭಾರತವನ್ನು ಭಾರತದ ನೆಲದಲ್ಲಿ ಸೋಲಿಸಿದ ಮೂರನೇ ತಂಡ ನ್ಯೂಝಿಲ್ಯಾಂಡ್ ಆಯಿತು. ಈಗ, ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲ್ಯಾಂಡ್ 1-0 ಅಂತರದಿಂದ ಮುಂದಿದೆ.

ತನ್ನ ಮೊದಲ ಇನಿಂಗ್ಸ್‌ ನಲ್ಲಿ 46 ರನ್‌ ಗಳ ಜುಜುಬಿ ಮೊತ್ತಕ್ಕೆ ಆಲೌಟಾಗಿದ್ದು ಭಾರತಕ್ಕೆ ದುಬಾರಿಯಾಯಿತು. ಆ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಅದಕ್ಕೆ ಕೊನೆಯವರೆಗೂ ಸಾಧ್ಯವಾಗಲಿಲ್ಲ. ನಾಲ್ಕನೇ ದಿನದಂದು, ಎರಡನೇ ಇನಿಂಗ್ಸ್‌ ನಲ್ಲಿ ಪ್ರತಿ ಹೋರಾಟ ನೀಡಿತಾದರೂ, ಒಂದು ಹಂತದ ಬಳಿಕ ಅದು ಮತ್ತೊಂದು ಇನಿಂಗ್ಸ್ ಕುಸಿತಕ್ಕೆ ಒಳಗಾಯಿತು. ಆ ದಿನ ಎರಡನೇ ಹೊಸ ಚೆಂಡಿನಿಂದ ಬೌಲಿಂಗ್ ದಾಳಿ ಆರಂಭಗೊಂಡ ಬಳಿಕ ಭಾರತದ ಏಳು ವಿಕೆಟ್‌ ಗಳು ಕೇವಲ 54 ರನ್‌ ಗಳಿಗೆ ಉರುಳಿದವು.

ಐದನೇ ದಿನದ ಆಟದ ಎರಡನೇ ಎಸೆತದಲ್ಲೇ ಭಾರತಕ್ಕೆ ಮೊದಲ ಮುನ್ನಡೆ ಲಭಿಸಿತು. ಜಸ್ಪ್ರೀತ್ ಬುಮ್ರಾರ ಎಸೆತದಲ್ಲಿ ನ್ಯೂಝಿಲ್ಯಾಂಡ್ನ ಆರಂಭಿಕ ಬ್ಯಾಟರ್ ಟಾಮ್ ಲ್ಯಾತಮ್ ಎಲ್ಬಿಡಬ್ಲ್ಯು ಆಗಿ ವಾಪಸಾದರು. ಅವರು ಆರು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಮರಳಿದರು.

ಇನ್ನೋರ್ವ ಆರಂಭಿಕ ಬ್ಯಾಟರ್ ಡೇವನ್ ಕಾನ್ವೇ ಕೂಡ ಎಲ್ಬಿಡಬ್ಲ್ಯು ಆಗಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಅವರು ಪೆವಿಲಿಯನ್ ಗೆ ವಾಪಸಾಗುವ ಮುನ್ನ 39 ಎಸೆತಗಳನ್ನು ಎದುರಿಸಿ 17 ರನ್‌ ಗಳ ಕೊಡುಗೆ ನೀಡಿದರು.

ನ್ಯೂಝಿಲ್ಯಾಂಡ್ ದ್ವಿತೀಯ ಇನಿಂಗ್ಸ್‌ ನ ಮೊದಲ ಬೌಂಡರಿಯನ್ನು ಯಂಗ್ 8ನೇ ಓವರ್ ನಲ್ಲಿ ಬಾರಿಸಿದರು. ಅದಕ್ಕಾಗಿ ಅವರು ಮುಹಮ್ಮದ್ ಸಿರಾಜ್ ಅವರ ಓವರನ್ನು ಆಯ್ದುಕೊಂಡರು. ರಚಿನ್ ರವೀಂದ್ರ ತಾನೆದುರಿಸಿದ ಬುಮ್ರಾರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು.

ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಯಂಗ್ ಎರಡು ಬೌಂಡರಿಗಳನ್ನು ಸಿಡಿಸಿದಾಗ ನ್ಯೂಝಿಲ್ಯಾಂಡ್ ನಿಧಾನವಾಗಿ ವಿಜಯದತ್ತ ಮುಂದುವರಿಯುತ್ತಿತ್ತು. ರಚಿನ್ ರವೀಂದ್ರ ಕೂಡ ಜಡೇಜ ಬೌಲಿಂಗ್ ನಲ್ಲಿ ಬೌಂಡರಿ ಬಾರಿಸಿದರು.

ಬಳಿಕ, ಕುಲದೀಪ್ ಯಾದವ್ ರನ್ನು ದಾಳಿಗಿಳಿಸಲಾಯಿತಾದರೂ, ಅವರ ಓವರ್ನಲ್ಲಿ ಯಂಗ್ ಸಿಕ್ಸರ್ ಬಾರಿಸಿದರು. ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ಬೌಂಡರಿ ಬಾರಿಸಿದಾಗ ನ್ಯೂಝಿಲ್ಯಾಂಡ್ 100 ರನ್‌ ಗಳ ಗಡಿಯನ್ನು ದಾಟಿತು. ಅವರು ಬಳಿಕ, ರವೀಂದ್ರ ಜಡೇಜರ ಎಸೆತವನ್ನು ಬೌಂಡರಿಗೆ ತಳ್ಳಿ ನ್ಯೂಝಿಲ್ಯಾಂಡ್ ನ ಐತಿಹಾಸಿಕ ವಿಜಯವನ್ನು ಘೋಷಿಸಿದರು.

ನ್ಯೂಝಿಲ್ಯಾಂಡ್ನ ಮೊದಲ ಇನಿಂಗ್ಸ್‌ ನಲ್ಲಿ ಶತಕ (157 ಎಸೆತಗಳಲ್ಲಿ 134 ರನ್) ಬಾರಿಸಿದ್ದ ರಚಿನ್ ರವೀಂದ್ರ ತಂಡದ ಮೊತ್ತಕ್ಕೆ ಗಣನೀಯ ಕೊಡುಗೆ ನೀಡಿದ್ದರು. ಮೊದಲ ಇನಿಂಗ್ಸ್‌ ನಲ್ಲಿ ನ್ಯೂಝಿಲ್ಯಾಂಡ್ 402 ರನ್ ಗಳಿಸಿತ್ತು.

ರಚಿನ್ ರವೀಂದ್ರರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಎರಡನೇ ಟೆಸ್ಟ್ ಪಂದ್ಯವು ಗುರುವಾರ ಪುಣೆಯಲ್ಲಿ ಆರಂಭಗೊಳ್ಳಲಿದೆ.

69 ವರ್ಷಗಳಲ್ಲಿ ಭಾರತದಲ್ಲಿ ಕಿವೀಸ್ ನ 3ನೇ ಟೆಸ್ಟ್ ಗೆಲುವು! 

 ಈ ಹಿಂದೆ ನ್ಯೂಝಿಲ್ಯಾಂಡ್ ಭಾರತದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದದ್ದು 1988ರಲ್ಲಿ. ಅಂದು ಇಂದಿನ ನ್ಯೂಝಿಲ್ಯಾಂಡ್ ತಂಡದ ಹೆಚ್ಚಿನ ಆಟಗಾರರು ಹುಟ್ಟಿಯೇ ಇರಲಿಲ್ಲ. ನ್ಯೂಝಿಲ್ಯಾಂಡ್ ನ ಇತ್ತೀಚಿನ ಟೆಸ್ಟ್ ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಜಾಝ್ ಪಟೇಲ್ ಅಂದು ಕೇವಲ ಒಂದು ತಿಂಗಳ ಮಗುವಾಗಿದ್ದರು.

ನ್ಯೂಝಿಲ್ಯಾಂಡ್ ನ ಕೇವಲ ಮೂವರು ನಾಯಕರ ನೇತೃತ್ವದ ಕ್ರಿಕೆಟ್ ತಂಡಗಳು ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿವೆ. ಈ ಸಾಧನೆಯನ್ನು ಮೊದಲು ದಾಖಲಿಸಿದವರು ಗ್ರಹಾಮ್ ಡೌಲಿಂಗ್. 1969ರಲ್ಲಿ ಅವರ ನೇತೃತ್ವದ ತಂಡವು ನಾಗಪುರದಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯವನ್ನು ಜಯಿಸಿತ್ತು.

ಅದಾದ ಸುಮಾರು ಎರಡು ದಶಕಗಳ ಬಳಿಕ, 1988ರಲ್ಲಿ ಜಾನ್ ರೈಟ್ ನೇತೃತ್ವದ ಕಿವೀಸ್ ತಂಡವು ಮುಂಬೈಯಲ್ಲಿ ಟೆಸ್ಟ್ ಜಯವನ್ನು ಸಂಪಾದಿಸಿತು. 2024ರಲ್ಲಿ, ಈ ಗೌರವವನ್ನು ಟಾಮ್ ಲ್ಯಾತಮ್ ಪಡೆದಿದ್ದಾರೆ. ಅವರು ಬೆಂಗಳೂರಿನಲ್ಲಿ ತನ್ನ ತಂಡವನ್ನು ಐತಿಹಾಸಿಕ ವಿಜಯದತ್ತ ಮುನ್ನಡೆಸಿದ್ದಾರೆ.

ಇದು 69 ವರ್ಷಗಳಲ್ಲಿ ಭಾರತದಲ್ಲಿ ನ್ಯೂಝಿಲ್ಯಾಂಡ್ ನ ಕೇವಲ ಮೂರನೇ ಟೆಸ್ಟ್ ವಿಜಯವಾಗಿದೆ. 1988ರಲ್ಲಿ, ಮುಂಬೈನ ವಾಂಖೇಡೆ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ದಂತಕತೆ ಸರ್ ರಿಚರ್ಡ್ ಹ್ಯಾಡ್ಲೀ 10 ವಿಕೆಟ್‌ ಗಳನ್ನು ಉರುಳಿಸಿ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News