ಅಭ್ಯಾಸ ಪಂದ್ಯದ ವೇಳೆ ಕೆ.ಎಲ್.ರಾಹುಲ್ ಮೊಣಕೈಗೆ ಗಾಯ

Update: 2024-11-15 16:05 GMT

ಕೆ.ಎಲ್.ರಾಹುಲ್ | PC : X 

ಪರ್ತ್: ಪರ್ತ್‌ನ ವಾಕಾ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡವು ಅಭ್ಯಾಸ ಪಂದ್ಯ ಆಡುತ್ತಿದ್ದಾಗ ಕೆ.ಎಲ್.ರಾಹುಲ್‌ರ ಬಲ ಮೊಣಕೈಗೆ ಗಾಯವಾಗಿದ್ದು, ಸ್ಕ್ಯಾನಿಂಗ್‌ಗಾಗಿ ಮೈದಾನವನ್ನು ತೊರೆದಿದ್ದಾರೆ. ನವೆಂಬರ್ 22ರಿಂದ ಆಸ್ಟ್ರೇಲಿಯದ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಇದು ಆತಂಕವನ್ನು ಹೆಚ್ಚಿಸಿದೆ.

ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರ ಎಸೆತದಲ್ಲಿ ಮೊಣಕೈಗೆ ಪೆಟ್ಟು ತಿನ್ನುವ ಮೊದಲು ರಾಹುಲ್ 29 ರನ್ ಗಳಿಸಿದ್ದರು. ಟೀಮ್ ಫಿಸಿಯೋ ಜೊತೆ ಸಮಾಲೋಚಿಸಿದ ನಂತರ ಬ್ಯಾಟರ್ ಮೈದಾನದಿಂದ ಹೊರ ನಡೆದರು.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆಡದೇ ಇದ್ದರೆ 32ರ ಹರೆಯದ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿತ್ತು.

ಕಳೆದ ತಿಂಗಳು ನ್ಯೂಝಿಲ್ಯಾಂಡ್ ವಿರುದ್ಧ ಬೆಂಗಳೂರು ಟೆಸ್ಟ್ ನಂತರ ರಾಹುಲ್ ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ಕರ್ನಾಟಕದ ಬ್ಯಾಟರ್ 2023ರ ಡಿಸೆಂಬರ್‌ನಲ್ಲಿ ಸೆಂಚೂರಿಯನ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿ ಟೆಸ್ಟ್ ಶತಕ ಗಳಿಸಿದ್ದರು. ಆ ನಂತರ 9 ಇನಿಂಗ್ಸ್‌ಗಳಲ್ಲಿ ಕೇವಲ ಎರಡು ಅರ್ಧಶತಕ ಗಳಿಸಿದ್ದರು.

►ಸ್ಕ್ಯಾನಿಂಗ್‌ಗೆ ಒಳಪಟ್ಟ ವಿರಾಟ್ ಕೊಹ್ಲಿ

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅನಿರ್ದಿಷ್ಟ ಗಾಯಕ್ಕೆ ಗುರುವಾರ ಸ್ಕ್ಯಾನಿಂಗ್‌ಗೆ ಒಳಗಾದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಆದರೆ ಇಂದು ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಳ್ಳದ ಕೊಹ್ಲಿ ಔಟಾಗುವ ಮೊದಲು 15 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಕುರಿತು ಸದ್ಯ ಚಿಂತಿಸುವ ಅಗತ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

2023ರ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಶತಕ ಗಳಿಸಿರುವ ಕೊಹ್ಲಿ ಸದ್ಯ ದೊಡ್ಡ ಸ್ಕೋರ್ ಗಳಿಸಲು ಪರದಾಡುತ್ತಿದ್ದಾರೆ. 2023ರ ಜುಲೈ ನಂತರ 14 ಟೆಸ್ಟ್ ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ ಕೇವಲ 2 ಬಾರಿ ಅರ್ಧಶತಕ ಗಳಿಸಿದ್ದಾರೆ.

2024ರಲ್ಲಿ ಆಡಿರುವ 6 ಟೆಸ್ಟ್ ಪಂದ್ಯಗಳಲ್ಲಿ ಕೇವಲ 22.72ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಆದರೆ ಕೊಹ್ಲಿ ಅವರು ಈ ಹಿಂದೆ ಆಸ್ಟ್ರೇಲಿಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 2012-13ರ ನಂತರ 4 ಬಾರಿ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿರುವ ಕೊಹ್ಲಿ 54ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News