ಈ ವರ್ಷದ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಕೊಹ್ಲಿ
ಹೊಸದಿಲ್ಲಿ : ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ 500ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ವರ್ಷದ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ ಅಹ್ಮದಾಬಾದ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿಗೆ ಇಂದು ಈ ಸಾಧನೆ ಮಾಡಲು 70 ರನ್ ಅಗತ್ಯವಿತ್ತು. ಕೊಹ್ಲಿ 44 ಎಸೆತಗಳಲ್ಲಿ 70 ರನ್ ಗಳಿಸಿ ಈ ಋತುವಿನಲ್ಲಿ ಆರ್ಸಿಬಿಗೆ 3ನೇ ಗೆಲುವು ತಂದುಕೊಟ್ಟರು. ಈ ವರ್ಷ 500 ರನ್ ಗಳಿಸಿದ ಆರ್ಸಿಬಿಯ ಆರಂಭಿಕ ಆಟಗಾರ ಕೊಹ್ಲಿ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ಬಾರಿ 500 ಪ್ಲಸ್ ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ರನ್ನು ಸೇರಿಕೊಂಡರು.
ಕೊಹ್ಲಿ ಹಾಗೂ ವಾರ್ನರ್ ತಲಾ 7 ಬಾರಿ ಒಂದೇ ಋತುವಿನಲ್ಲಿ 500 ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ತಲಾ 5 ಬಾರಿ 500 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ.
ರನ್ ಯಂತ್ರ ಕೊಹ್ಲಿ ಐಪಿಎಲ್-2024ರಲ್ಲಿ 71.43ರ ಸರಾಸರಿಯಲ್ಲಿ 4 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ.
ಕೊಹ್ಲಿ ಬರೋಬ್ಬರಿ 500 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್(428 ರನ್)ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ನ ಸಂಜು ಸ್ಯಾಮ್ಸನ್(385 ರನ್), ಲಕ್ನೊ ಸೂಪರ್ ಜಯಂಟ್ಸ್ನ ಕೆ.ಎಲ್.ರಾಹುಲ್(378 ರನ್) ಹಾಗೂ ಡೆಲ್ಲಿ ನಾಯಕ ರಿಷಭ್ ಪಂತ್ (371) ಆ ನಂತರದ ಸ್ಥಾನದಲ್ಲಿದ್ದಾರೆ.