ನವೀನ್ವುಲ್ ಹಕ್ ಗೆ ತಮಾಷೆ ಮಾಡದಂತೆ ದಿಲ್ಲಿ ಪ್ರೇಕ್ಷಕರಿಗೆ ಕೊಹ್ಲಿ ಸೂಚನೆ: ಗಂಭೀರ್ ಶ್ಲಾಘನೆ
ಹೊಸದಿಲ್ಲಿ: ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಗೆ ತಮಾಷೆ ಮಾಡದಂತೆ ದಿಲ್ಲಿ ಜನತೆಗೆ ಸನ್ನೆ ಮೂಲಕ ಸೂಚಿಸಿದ ವಿರಾಟ್ ಕೊಹ್ಲಿಯ ನಡವಳಿಕೆಯನ್ನು ಎರಡು ಬಾರಿ ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ ಪ್ರಶಂಸಿಸಿದ್ದಾರೆ.
ನವೀನ್ ಹಾಗೂ ಕೊಹ್ಲಿ ಅವರು ಸೌಹಾರ್ದದಿಂದ ಹಸ್ತಲಾಘವ ಮಾಡಿದ ನಂತರ ಪರಸ್ಪರ ಬೆನ್ನು ತಟ್ಟಿಕೊಂಡರು. ಈ ಹೃದಯಸ್ಪರ್ಶಿ ಕ್ಷಣವು ಕ್ರಿಕೆಟ್ ಮೈದಾನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಮೀರಿದ ಏಕತೆ ಹಾಗೂ ಸ್ನೇಹಕ್ಕೆ ನಿದರ್ಶನವಾಗಿದೆ.
ಇದೊಂದು ಉತ್ತಮ ನಡವಳಿಕೆಯಾಗಿದೆ. ಮುಂಬರುವ ಪ್ರತಿ ಪಂದ್ಯದಲ್ಲೂ ಜನರು ವಿರಾಟ್ ಅವರ ಹಾವಭಾವವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಏಕೆಂದರೆ ಪ್ರತಿಯೊಬ್ಬರ ವೃತ್ತಿಪರ ಕ್ರಿಕೆಟಿಗನು ದೇಶಕ್ಕಾಗಿ ಆಡಲು ಹಾಗೂ ಐಪಿಎಲ್ ನಲ್ಲಿ ಆಡಲು ಶ್ರಮಿಸುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.
ನಿಮಗೆ ಯಾರನ್ನೂ ಬೆಂಬಲಿಸಲು ಸಾಧ್ಯವಾಗದಿದ್ದರೆ, ಅವರನ್ನು ಟೀಕಿಸಬೇಡಿ. ನಿಮ್ಮ ನೆಚ್ಚಿನ ಆಟಗಾರನನ್ನು ಬೆಂಬಲಿಸುವ ಹಕ್ಕು ನಿಮಗಿದೆ. ಆದರೆ ಆಟಗಾರನನ್ನು ಟೀಕಿಸುವ ಹಕ್ಕು ನಿಮಗಿಲ್ಲ. ಪ್ರೇಕ್ಷಕರು ತುಂಬಾ ಸಂವೇದನಾಶೀಲರಾಗಿ ವರ್ತಿಸಬೇಕು. ಆತಿಥೇಯ ದೇಶವಾಗಿ ನಾವು ಉತ್ತಮ ರಾಯಭಾರಿಯಾಗಬೇಕು ಎಂದು ಗಂಭೀರ್ ಮನವಿ ಮಾಡಿದರು.
ಐಪಿಎಲ್ 2023ರಲ್ಲಿ ಪರಸ್ಪರ ವಾಕ್ಸಮರದಲ್ಲಿ ತೊಡಗಿಸಿಕೊಂಡಾಗಿನಿಂದ ಕೊಹ್ಲಿ ಹಾಗೂ ನವೀನ್ ನಡುವೆ ಭಿನ್ನಾಭಿಪ್ರಾಯವಿದೆ. ಕೊಹ್ಲಿ ಹಿನ್ನಡೆಯನ್ನು ಎದುರಿಸಿದಾಗ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಾಗಲೆಲ್ಲಾ ಮಾವಿನ ಹಣ್ಣಿನ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅಫ್ಘಾನ್ ಆಲ್ ರೌಂಡರ್ ನವೀನ್ ತಮಾಷೆ ಮಾಡುತ್ತಿದ್ದರು.