ಕೋಲ್ಕತ್ತಕ್ಕೆ 24 ರನ್ ಗೆಲುವು | ಕಡಿಮೆ ಸ್ಕೋರ್ ದಾಖಲಾದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರದಾಟ

Update: 2024-05-03 18:17 GMT

Pic- BCCI

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಶುಕ್ರವಾರ ಕೋಲ್ಕತ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 24 ರನ್‍ಗಳಿಂದ ಸುಲಭವಾಗಿ ಸೋಲಿಸಿದೆ.

ಇಲ್ಲಿನ ವಾಂಖೇಡೆ ಸ್ಟೇಡಿಯಮ್‍ನಲ್ಲಿ ಗೆಲುವಿಗೆ 170 ರನ್‍ಗಳ ಸುಲಭ ಗುರಿಯನ್ನು ಮುಂಬೈ ಇಂಡಿಯನ್ಸ್ ಪಡೆಯಿತಾದರೂ, ಅದು 18.5 ಓವರ್‌ ಗಳಲ್ಲಿ 145 ರನ್‍ಗಳಿಗೆ ತನ್ನ ಇನಿಂಗ್ಸ್ ಮುಗಿಸಿತು.

ಮುಂಬೈ ಪರವಾಗಿ ಸೂರ್ಯಕುಮಾರ್ ಮಾತ್ರ ದೃಢ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸಿದರು. ಅವರು 35 ಎಸೆತಗಳಲ್ಲಿ 56 ರನ್ ಗಳಿಸಿದರು.

ಮುಂಬೈ ಇಂಡಿಯನ್ಸ್ ಇನಿಂಗ್ಸ್ ಉದ್ದಕ್ಕೂ ನಿಯಮಿತವಾಗಿ ವಿಕೆಟ್‍ಗಳನ್ನು ಕಳೆದುಕೊಂಡಿತು. ಕೋಲ್ಕತ ಬೌಲರ್‌ ಗಳ ನಿಖರ ದಾಳಿಯ ಎದುರು ಮುಂಬೈ ಬ್ಯಾಟರ್‌ ಗಳು ನೆಲೆ ಕಳೆದುಕೊಂಡರು.

ಕೋಲ್ಕತ ಪರವಾಗಿ ಮಿಚೆಲ್ ಸ್ಟಾರ್ಕ್ 4 ವಿಕೆಟ್‍ಗಳನ್ನು ಉರುಳಿಸಿದರೆ, ವರುಣ್ ಚಕ್ರವರ್ತಿ, ಸುನೀಲ್ ನರೈನ್ ಮತ್ತು ಆ್ಯಂಡ್ರಿ ರಸೆಲ್ ತಲಾ 2 ವಿಕೆಟ್‍ಗಳನ್ನು ಪಡೆದರು.

ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ನೈಟ್ ರೈಡರ್ಸ್ ತಂಡವು 19.5 ಓವರ್‌ ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 169 ರನ್‍ಗಳನ್ನು ಗಳಿಸಿತು.

ಮುಂಬೈ ಇಂಡಿಯನ್ಸ್ ಬೌಲರ್‌ ಗಳು ಮೊದಲ ಏಳು ಓವರ್‌ ಗಳಲ್ಲಿ ಕೋಲ್ಕತ ನೈಟ್ ರೈಡರ್ಸ್ ಬ್ಯಾಟರ್‌ ಗಳನ್ನು ಚಿಂದಿ ಉಡಾಯಿಸಿದರು. ಪಂದ್ಯದ ಮೊದಲ ಓವರ್‌ ನಲ್ಲೇ ನುವಾನ್ ತುಷಾರ ಕೋಲ್ಕತ ನೈಟ್ ರೈಡರ್ಸ್‍ನ ಫಿಲ್ ಸಾಲ್ಟ್ (5)ರ ವಿಕೆಟ್ ಉರುಳಿಸಿದರು. ಬಳಿಕ ಮೂರನೇ ಓವರ್‌ ನಲ್ಲಿ, ಅಂಗ್‍ಕೃಷ್ ರಘುವಂಶಿ (13) ಮತ್ತು ಶ್ರೇಯಸ್ ಅಯ್ಯರ್ (6)ರ ವಿಕೆಟ್‍ಗಳನ್ನು ಪಡೆದರು.

ಈ ನಡುವೆ, ಜಸ್ಪ್ರೀತ್ ಬುಮ್ರಾ ಎರಡನೇ ಓವರ್‌ ನಲ್ಲಿ ಕೇವಲ ಎರಡು ರನ್‍ಗಳನ್ನು ಕೊಟ್ಟರು. ಬಳಿಕ ಹಾರ್ದಿಕ್ ಪಾಂಡ್ಯ ಸುನೀಲ್ ನರೈನ್ (8)ರ ವಿಕೆಟ್ ಪಡೆದರು.

ಇನಿಂಗ್ಸ್ ನ ಏಳನೇ ಓವರ್‌ ನಲ್ಲಿ ಹಾಗೂ ತನ್ನ ಮೊದಲ ಎಸೆತದಲ್ಲಿ ಪಿಯೂಶ್ ಚಾವ್ಲಾ, ರಿಂಕು ಸಿಂಗ್ (9)ರ ವಿಕೆಟನ್ನು ಉರುಳಿಸಿದರು.

ಒಂದು ಹಂತದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು 57 ರನ್‍ಗಳನ್ನು ಗಳಿಸುವಷ್ಟರಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು.

ಆಗ ತಂಡದ ನೆರವಿಗೆ ಧಾವಿಸಿದವರು ವೆಂಕಟೇಶ ಅಯ್ಯರ್ ಮತ್ತು ಮನೀಶ್ ಪಾಂಡೆ. ಅವರು ಆರನೇ ವಿಕೆಟ್‍ಗೆ 62 ಎಸೆತಗಳಲ್ಲಿ 83 ರನ್‍ಗಳನ್ನು ಕೂಡಿಸಿದರು. ಪಾಂಡೆ 31 ಎಸೆತಗಳಲ್ಲಿ 42 ರನ್‍ಗಳನ್ನು ಗಳಿಸಿದರೆ, ವೆಂಕಟೇಶ್ ಅಯ್ಯರ್ 52 ಎಸೆತಗಳಲ್ಲಿ 70 ರನ್‍ಗಳನ್ನು ಗಳಿಸಿದರು.

ಅವರಿಬ್ಬರು ಕೋಲ್ಕತ ನೈಟ್ ರೈಡರ್ಸ್ ಇನಿಂಗ್ಸ್‍ಗೆ ಮರುಜೀವ ನೀಡಿದರು.

ಜಸ್ಪ್ರೀತ್ ಬುಮ್ರಾರ ಓವರ್‌ ಗಳನ್ನು ಕೊನೆಯ ಹಂತಕ್ಕೆ ಕಾದಿರಿಸಲಾಗಿತ್ತು. ಅಂತಿಮ ಓವರ್‌ ಗಳಲ್ಲಿ ಕೋಲ್ಕತದ ಬ್ಯಾಟರ್‌ ಗಳ ಧಾವಂತಕ್ಕೆ ಅವರು ಕಡಿವಾಣ ಹಾಕಿದರು. ಒಂದು ಹಂತದಲ್ಲಿ, ಕೋಲ್ಕತದ ಬ್ಯಾಟರ್‌ ಗಳು ತಂಡದ ಸ್ಕೋರನ್ನು 190 ದಾಟಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದರು.

ಆದರೆ, ಬುಮ್ರಾ ಅಂತಿಮ ಓವರ್‌ ಗಳಲ್ಲಿ ಮೂರು ವಿಕೆಟ್‍ಗಳನ್ನು ಕೆಡವಿ ರನ್ ಗತಿಗೆ ತಡೆ ಒಡ್ಡಿದರು. ಕೋಲ್ಕತ ನೈಟ್ ರೈಡರ್ಸ್ ಅಂತಿಮವಾಗಿ 169 ರನ್‍ಗಳನ್ನು ಗಳಿಸಿತು.

ನುವಾನ್ ತುಷಾರ 42 ರನ್‍ಗಳನ್ನು ನೀಡಿ 3 ವಿಕೆಟ್‍ಗಳನ್ನು ಉರುಳಿಸಿದರೆ, ಬುಮ್ರಾ ಕೇವಲ 18 ರನ್‍ಗಳನ್ನು ಕೊಟ್ಟು 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ

ಕೋಲ್ಕತ ನೈಟ್ ರೈಡರ್ಸ್ (19.5 ಓವರ್‌ ಗಳಲ್ಲಿ) 169

ಅಂಗ್‍ಕೃಷ್ ರಘುವಂಶಿ 13, ವೆಂಕಟೇಶ ಅಯ್ಯರ್ 70, ಮನೀಶ್ ಪಾಂಡೆ 42

ನುವಾನ್ ತುಷಾರ 3-42, ಜಸ್ಪ್ರೀತ್ ಬುಮ್ರಾ 3-18, ಹಾರ್ದಿಕ್ ಪಾಂಡ್ಯ 2-44

ಮುಂಬೈ ಇಂಡಿಯನ್ಸ್ (18.5 ಓವರ್‌ ಗಳಲ್ಲಿ) 145

ಇಶಾನ್ ಕಿಶನ್ 13, ರೋಹಿತ್ ಶರ್ಮ 11, ನಮನ್ ಧೀರ್ 11, ಸೂರ್ಯಕುಮಾರ್ ಯಾದವ್ 56, ಟಿಮ್ ಡೇವಿಡ್ 24

ಮಿಚೆಲ್ ಸ್ಟಾರ್ಕ್ 4-33, ವರುಣ್ ಚಕ್ರವರ್ತಿ 2-22, ಸುನೀಲ್ ನರೈನ್ 2-22, ಆ್ಯಂಡ್ರಿ ರಸೆಲ್ 2-30

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News