ನನ್ನ ವೃತ್ತಿಜೀವನವನ್ನು ಕೊನೆಯಾಗಿಸುವುದಾಗಿ ಲಲಿತ್ ಮೋದಿ ಬೆದರಿಕೆ ಒಡ್ಡಿದ್ದರು: ಮಾಜಿ RCB ಆಟಗಾರನ ಗಂಭೀರ ಆರೋಪ
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನನ್ನ ಮೊದಲ ಆಯ್ಕೆಯಾಗಿರಲಿಲ್ಲ. ಲಲಿತ್ ಮೋದಿಯ ಪ್ರತಿಕ್ರಿಯೆಯಿಂದಾಗಿ ನಾನು RCB ತಂಡವನ್ನು ಸೇರ್ಪಡೆಯಾಗಬೇಕಾಯಿತು ಎಂದು ಮಾಜಿ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ರವೀಣ್ ಕುಮಾರ್ ಬಹಿರಂಗಪಡಿಸಿದ್ದಾರೆ.
Lallantopನೊಂದಿಗೆ ಈ ಕುರಿತು ಮಾತನಾಡಿರುವ ಅವರು, ನಾನು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸೇರ್ಪಡೆಯಾಗಲು ಬಯಸಿದ್ದೆ. ಆದರೆ, ನಾನು RCB ಅಧಿಕಾರಿಯೊಂದಿಗೆ ಸಹಿ ಮಾಡಿದ್ದ ಪತ್ರವೊಂದು ನಂತರ ಗುತ್ತಿಗೆ ಕರಾರಾಗಿ ಮಾರ್ಪಟ್ಟಿತು. ಈ ಕುರಿತು ನಾನು ಲಲಿತ್ ಮೋದಿಯವರ ಗಮನಕ್ಕೆ ತರಲು ಬಯಸಿದಾಗ, ಅವರು ನನ್ನ ವೃತ್ತಿ ಜೀವನವನ್ನು ಅಂತ್ಯಗೊಳಿಸುವ ಬೆದರಿಕೆ ಒಡ್ಡಿದ್ದರು ಎಂದು ಹೇಳಿದ್ದಾರೆ.
“ನನ್ನ ತವರಿನಿಂದ RCB ದೂರವಿದ್ದುದರಿಂದ ನನಗೆ ಆ ತಂಡದಲ್ಲಿ ಆಡುವ ಬಯಕೆ ಇರಲಿಲ್ಲ. ನನಗೆ ಇಂಗ್ಲಿಷ್ ತಿಳಿದಿರಲಿಲ್ಲ ಹಾಗೂ ಆಹಾರವೂ ನನ್ನ ಇಷ್ಟಕ್ಕೆ ಒಗ್ಗುತ್ತಿರಲಿಲ್ಲ. ದಿಲ್ಲಿಯು ಮೀರತ್ ಗೆ ತೀರಾ ಸನಿಹವಿರುವುದರಿಂದ ನಾನು ಯಾವಾಗಲಾದರೂ ಒಮ್ಮೆ ನನ್ನ ಮನೆಗೆ ತೆರಳಬಹುದಿತ್ತು. ಆದರೆ, ವ್ಯಕ್ತಿಯೊಬ್ಬರು ನನಗೆ ಪತ್ರವೊಂದಕ್ಕೆ ಸಹಿ ಮಾಡುವಂತೆ ಮಾಡಿದರು. ಅದು ಗುತ್ತಿಗೆ ಕರಾರು ಪತ್ರ ಎಂದು ನನಗೆ ತಿಳಿದಿರಲಿಲ್ಲ. ನನಗೆ ದಿಲ್ಲಿಯ ಪರವಾಗಿ ಆಡಬೇಕಿದೆಯೆ ಹೊರತು ಬೆಂಗಳೂರಿನ ಪರ ಅಲ್ಲ ಎಂದು ನಾನು ಅವರಿಗೆ ತಿಳಿಸಿದೆ. ನನ್ನನ್ನು ಕರೆಸಿಕೊಂಡ ಲಲಿತ್ ಮೋದಿ, ನನ್ನ ವೃತ್ತಿ ಜೀವನವನ್ನು ಅಂತ್ಯಗೊಳಿಸುವುದಾಗಿ ಬೆದರಿಕೆ ಒಡ್ಡಿದರು” ಎಂದು ಅವರು ಬಹಿರಂಗ ಪಡಿಸಿದ್ದಾರೆ.