ಲಾರೆಸ್ ಸ್ಪೋರ್ಟ್ಸ್ ಅವಾರ್ಡ್ಸ್: ವರ್ಷದ ಕ್ರೀಡಾಪಟು ಪ್ರಶಸ್ತಿ ಸ್ವೀಕರಿಸಿದ ಜೊಕೊವಿಕ್

Update: 2024-04-23 15:46 GMT

ಜೊಕೊವಿಕ್ | PC : X 

ಮ್ಯಾಡ್ರಿಡ್ : ಸರ್ಬಿಯದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಸೋಮವಾರ ನಡೆದ ಲಾರೆಸ್ ಸ್ಪೋರ್ಟ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 2024ರ ಸಾಲಿನ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಸ್ಪೇನ್‌ನ ವಿಶ್ವಕಪ್ ವಿಜೇತ ಮಿಡ್‌ಫೀಲ್ಡರ್ ಎತಾನಾ ಬೋನ್ಮತಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಸ್ಪೇನ್‌ನ ಮಹಿಳೆಯರ ಫುಟ್ಬಾಲ್ ತಂಡವು ವರ್ಷದ ಟೀಮ್ ಪ್ರಶಸ್ತಿಗೆ ಆಯ್ಕೆಯಾಗಿದೆ.

7 ಬಾರಿಯ ಸೂಪರ್ ಬೌಲ್ ಚಾಂಪಿಯನ್ ಟಾಮ್ ಬ್ರಾಡಿ ಅವರು ಜೊಕೊವಿಕ್‌ಗೆ ಲಾರೆಸ್ ಪ್ರಶಸ್ತಿ ಪ್ರದಾನಿಸಿದರು. 2023ರಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಅಗ್ರ ರ್ಯಾಂಕಿನ ಟೆನಿಸ್ ಆಟಗಾರ ಜೊಕೊವಿಕ್ ಐದನೇ ಬಾರಿ ಲಾರೆಸ್ ಪ್ರಶಸ್ತಿಗೆ ಭಾಜನರಾದರು. ಕಳೆದ ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್ ಜಯಿಸಿದ ನಂತರ ಜೊಕೊವಿಕ್ 24ನೇ ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು.

ಜೊಕೊವಿಕ್ 2023ರಲ್ಲಿ ಎಲ್ಲ 4 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಸ್ಪರ್ಧಿಸಿದ್ದರು. ಯುಎಸ್ ಓಪನ್‌ನಲ್ಲದೆ, ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು. ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ಸ್ ಅಪ್ ಎನಿಸಿಕೊಂಡಿದ್ದರು.

ಕಳೆದ ವರ್ಷದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿದ್ದ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ವರ್ಷದ ಪುನರಾಗಮನ ಪ್ರಶಸ್ತಿ (ಕಮ್‌ಬ್ಯಾಕ್ ಆಫ್ ದಿ ಇಯರ್ ಅವಾರ್ಡ್)ಗೆದ್ದುಕೊಂಡಿದ್ದಾರೆ. 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ನಂತರ ವರ್ಲ್ಡ್ ಚಾಂಪಿಯನ್‌ಶಿಪ್ ಅವರ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News