ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 5 ವಿಕೆಟ್ ಪಡೆದ ಬಾಂಗ್ಲಾದೇಶದ ಮೊದಲ ಬೌಲರ್ ಮಹ್ಮೂದ್

Update: 2024-09-20 15:37 GMT

 ಹಸನ್ ಮಹ್ಮೂದ್ | PC : PTI 

ಚೆನ್ನೈ : ಭಾರತದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಬಾಂಗ್ಲಾದೇಶದ ಮೊದಲ ಬೌಲರ್ ಎಂಬ ಹಿರಿಮೆಗೆ ಹಸನ್ ಮಹ್ಮೂದ್ ಪಾತ್ರರಾಗಿದ್ದಾರೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ ಹಸನ್ ಈ ಸಾಧನೆ ಮಾಡಿದ್ದಾರೆ.

ಮಹ್ಮೂದ್ ಅವರ ಅಮೋಘ ಬೌಲಿಂಗ್‌ನ(5-83)ಸಹಾಯದಿಂದ ಬಾಂಗ್ಲಾದೇಶ ತಂಡ ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 376 ರನ್‌ಗೆ ಆಲೌಟ್ ಮಾಡಿತು.

ಈ ಹಿಂದೆ 2019ರಲ್ಲಿ ಇಂದೋರ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅಬು ಜಾವೇದ್(4-108)ಬಾಂಗ್ಲಾದೇಶದ ಪರ ಶ್ರೇಷ್ಠ ಬೌಲಿಂಗ್ ಮಾಡಿದ್ದಾರೆ.

ಕೇವಲ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ 24ರ ಹರೆಯದ ಮಹ್ಮೂದ್ ಅವರು ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ(6 ರನ್), ಶುಭಮನ್ ಗಿಲ್(0), ವಿರಾಟ್ ಕೊಹ್ಲಿ(6 ರನ್) ಹಾಗೂ ರಿಷಭ್ ಪಂತ್(39 ರನ್) ಅವರಂತಹ ಪ್ರಮುಖ ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದ್ದರು.

ಎರಡನೇ ದಿನವಾದ ಶುಕ್ರವಾರ ಜಸ್‌ಪ್ರಿತ್ ಬುಮ್ರಾ ವಿಕೆಟನ್ನು ಉರುಳಿಸುವ ಮೂಲಕ ಐದು ವಿಕೆಟ್ ಗೊಂಚಲು ಪೂರೈಸಿದರು.

ಇದೀಗ ಮಹ್ಮೂದ್ ಟೆಸ್ಟ್‌ನಲ್ಲಿ ಸತತ ಎರಡನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಕಳೆದ ತಿಂಗಳು ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 43 ರನ್‌ಗೆ 5 ವಿಕೆಟ್‌ಗಳನ್ನು ಉರುಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News