400 ವಿಕೆಟ್ ಪಡೆದ ಭಾರತದ ಆರನೇ ವೇಗದ ಬೌಲರ್ ಬುಮ್ರಾ

Update: 2024-09-20 15:27 GMT

ಜಸ್‌ಪ್ರಿತ್ ಬುಮ್ರಾ |  PC : PTI

ಹೊಸದಿಲ್ಲಿ : ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಉರುಳಿಸಿದ ಭಾರತದ ಆರನೇ ವೆಗದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ ಬಾಂಗ್ಲಾದೇಶದ ವೇಗದ ಬೌಲರ್ ಹಸನ್ ಮಹ್ಮೂದ್ ವಿಕೆಟ್‌ನ್ನು ಕಬಳಿಸಿದ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಬುಮ್ರಾ ಅವರು ಭಾರತದ ಓರ್ವ ಅತ್ಯಂತ ಯಶಸ್ವಿ ಹಾಗೂ ವಿಶಿಷ್ಟ ವೇಗದ ಬೌಲರ್ ಆಗಿದ್ದು, ತನ್ನ ವಿಭಿನ್ನ ಶೈಲಿಯ ಬೌಲಿಂಗ್, ಅಮೋಘ ವೇಗ ಹಾಗೂ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಚೊಚ್ಚಲ ಪಂದ್ಯವನ್ನಾಡಿದ ನಂತರ ಬುಮ್ರಾ ಭಾರತದ ಬೌಲಿಂಗ್ ದಾಳಿಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಬುಮ್ರಾ ಅವರು ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಡೆತ್ ಓವರ್‌ನಲ್ಲಿ ಪಿನ್‌ಪಾಯಿಂಟ್ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯದ ಮೂಲಕ ಬ್ಯಾಟರ್‌ಗಳನ್ನು ಕಂಗೆಡಿಸುತ್ತಿದ್ದಾರೆ. ಬುಮ್ರಾ ಅವರ ಸ್ಥಿರ ಪ್ರದರ್ಶನ ಹಾಗೂ ಹೊಸ ಚೆಂಡಿನ ಮೇಲಿನ ಹಿಡಿತ ಭಾರತವು ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಯಶಸ್ಸು ಸಾಧಿಸಲು ನೆರವಾಗುತ್ತಿದೆ.

ಬುಮ್ರಾ ಅವರು ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪೂರೈಸಿದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ. ಟಿ-20 ಕ್ರಿಕೆಟ್‌ನಲ್ಲೂ ವೇಗವಾಗಿ 50 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬುಮ್ರಾ ಅವರು ಹೊಸ ಚೆಂಡು ಹಾಗೂ ರಿವರ್ಸ್ ಸ್ವಿಂಗ್ ಆಗುವ ಹಳೆ ಚೆಂಡಿನಲ್ಲೂ ಏಕರೂಪ ಪ್ರದರ್ಶನ ನೀಡುತ್ತಿದ್ದಾರೆ. ಅವರ ಟೆಸ್ಟ್ ಬೌಲಿಂಗ್ ಸರಾಸರಿಯು ಭಾರತೀಯ ವೇಗಿಗಳ ಪೈಕಿ ಶ್ರೇಷ್ಠಮಟ್ಟದ್ದಾಗಿದೆ.

ಬುಮ್ರಾ ಅವರು ಬೌಲಿಂಗ್‌ನ ವೇಳೆ ವೇಗದ ಜೊತೆಗೆ ಹೆಚ್ಚುವರಿ ಬೌನ್ಸ್ ಮೂಲಕ ಎಲ್ಲ ಪಿಚ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಭೀತಿ ಹುಟ್ಟಿಸುತ್ತಿದ್ದಾರೆ.

ಮುಂಬರುವ ವರ್ಷಗಳಲ್ಲಿ ಭಾರತದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಬೌಲಿಂಗ್ ದಾಳಿಯನ್ನು ಬುಮ್ರಾ ಮುನ್ನಡೆಸುವ ನಿರೀಕ್ಷೆ ಇದೆ. ವಿಶೇಷವಾಗಿ ವಿದೇಶದ ಸವಾಲಿನ ಪರಿಸ್ಥಿತಿಯಲ್ಲಿ ಬುಮ್ರಾ ಅವರ ಕೌಶಲ್ಯವು ತಂಡಕ್ಕೆ ಅನಿವಾರ್ಯವಾಗಿದೆ.

► ಬುಮ್ರಾಗಿಂತ ಮೊದಲು 400 ಅಂತರ್‌ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿರುವ ಭಾರತದ ವೇಗಿಗಳು

ಕಪಿಲ್‌ದೇವ್: 687 ವಿಕೆಟ್

ಝಹೀರ್ ಖಾನ್: 597 ವಿಕೆಟ್

ಜಾವಗಲ್ ಶ್ರೀನಾಥ್: 551 ವಿಕೆಟ್

ಮುಹಮ್ಮದ್ ಶಮಿ: 448 ವಿಕೆಟ್

ಇಶಾಂತ್ ಶರ್ಮಾ: 434 ವಿಕೆಟ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News