ಮಲೇಶ್ಯ ಮಾಸ್ಟರ್ಸ್ |ಪಿ.ವಿ. ಸಿಂಧು ಸೆಮಿ ಫೈನಲ್‌ಗೆ ಲಗ್ಗೆ

Update: 2024-05-24 17:01 GMT

ಪಿ.ವಿ. ಸಿಂಧು | PTI 

ಕೌಲಾಲಂಪುರ : ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪುವ ಮೂಲಕ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಶುಕ್ರವಾರ 55 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.15ನೇ ಆಟಗಾರ್ತಿ ಸಿಂಧು ಚೀನಾದ ಅಗ್ರ ಶ್ರೇಯಾಂಕದ ಹಾನ್ ಯುಇ ವಿರುದ್ಧ 21-13, 14-21, 21-12 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಕಳೆದ ತಿಂಗಳು ನಿಂಗ್ಬೊದಲ್ಲಿ ನಡೆದಿದ್ದ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಆಟಗಾರ್ತಿಯ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು.

2022ರಲ್ಲಿ ಸಿಂಗಾಪುರ ಓಪನ್‌ನಲ್ಲಿ ಕೊನೆಯ ಬಾರಿ ಚೀನಾದ ಆಟಗಾರ್ತಿಯನ್ನು ಮಣಿಸಿದ್ದ ಸಿಂಧು 55 ನಿಮಿಷಗಳ ಹಣಾಹಣಿಯಲ್ಲಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದರು. ಮೊದಲ ಗೇಮ್‌ನಲ್ಲಿ 3-3 ಟೈನಿಂದ ಹೊರ ಬಂದ ಸಿಂಧು ಮಧ್ಯಂತರದಲ್ಲಿ 11-5 ಮುನ್ನಡೆ ಪಡೆದರು. ಚೀನಾ ಆಟಗಾರ್ತಿ ಸೋಲಿನ ಅಂತರವನ್ನು 13-16ಕ್ಕೆ ಇಳಿಸಿದರು. ಆದರೆ ಸಿಂಧು ಸತತ 5 ಅಂಕಗಳನ್ನು ಗಳಿಸಿ ಮೊದಲ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ 5-0 ಮುನ್ನಡೆ ಪಡೆದು ನಂತರ ಅದನ್ನು 15-2ಕ್ಕೆ ವಿಸ್ತರಿಸಿದ ಹಾನ್ ಪ್ರಬಲ ತಿರುಗೇಟು ನೀಡಿದರು. ಸಿಂಧು ಅವರ ತೀವ್ರ ಪ್ರಯತ್ನದ ಹೊರತಾಗಿಯೂ ಹಾನ್ 2ನೇ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡರು.

ಮೂರನೇ ಗೇಮ್‌ನಲ್ಲಿ ಸಿಂಧು ಹಿಡಿತ ಸಾಧಿಸಿದ್ದು ಮಧ್ಯಂತರದಲ್ಲಿ 11-3 ಮುನ್ನಡೆ ಪಡೆದರು. ಆರಂಭಿಕ ಮುನ್ನಡೆಯ ಲಾಭ ಪಡೆದ ಸಿಂಧು 3ನೇ ಗೇಮ್ ಅನ್ನು 21-12 ಅಂತರದಿಂದ ಗೆದ್ದುಕೊಂಡರು.

ಮಾಜಿ ವಿಶ್ವ ಚಾಂಪಿಯನ್ ಸಿಂಧು ಸೆಮಿ ಫೈನಲ್ ಸುತ್ತಿನಲ್ಲಿ ಇಂಡೋನೇಶ್ಯದ ಪುಟ್ರಿ ಕುಸುಮಾ ವರ್ದಿನಿ ಅಥವಾ ಥಾಯ್ಲೆಂಡ್‌ನ ಬುಸನನ್ ಒಂಗ್‌ಬಮ್‌ರುಂಗ್‌ಫನ್‌ರನ್ನು ಎದುರಿಸಲಿದ್ದಾರೆ.

*ಅಶ್ಮಿತಾ ಚಲಿಹಾಗೆ ಸವಾಲು ಅಂತ್ಯ: ಇದೇ ವೇಳೆ ಮತ್ತೊಂದು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಶ್ಮಿತಾ ಚಲಿಹಾ ಅವರ ಗೆಲುವಿನ ಓಟ ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಅಶ್ಮಿತಾ ಅವರು ಚೀನಾದ ಆರನೇ ಶ್ರೇಯಾಂಕದ ಝಾಂಗ್ ಯಿ ಮಾನ್ ವಿರುದ್ಧ 10-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News