ಮನು ಭಾಕರ್ ಅದೃಷ್ಟ ಬದಲಿಸಿದ ಪ್ಯಾರಿಸ್ ಒಲಿಂಪಿಕ್ಸ್ | ಕೋಟಿ ರೂ.ಗೆ ಏರಿಕೆಯಾದ ಜಾಹೀರಾತು ಸಂಭಾವನೆ!

Update: 2024-08-02 12:35 GMT

ಮನು ಭಾಕರ್ | PC : Olympics.com

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆ ಹಾಗೂ ಮಿಶ್ರಿ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿರುವ ಮನು ಭಾಕರ್ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತೊಂದು ಪದಕಕ್ಕೆ ಮುತ್ತಿಡುವ ಸನಿಹದಲ್ಲಿದ್ದಾರೆ. ಅವರ ಜನಪ್ರಿಯತೆ ಈಗ ಹಲವು ಪಟ್ಟು ಹೆಚ್ಚಾಗಿದೆ.

ಈಗಾಗಲೇ ಎರಡು ಕಂಚಿನ ಪದಕಗಳನ್ನು ಗೆದ್ದದ್ದಕ್ಕಾಗಿ ಇದೀಗ ಸುಮಾರು 40 ಬ್ರ್ಯಾಂಡ್ ಗಳು ಮನು ಭಾಕರ್ ಅವರನ್ನು ಜಾಹೀರಾತಿಗಾಗಿ ಸಂಪರ್ಕಿಸಿವೆ ಎಂಬ ಸುದ್ದಿ ಹೊರ ಬಿದ್ದಿದೆ. ಮನು ಭಾಕರ್ ತಮ್ಮ ಗಮನವನ್ನೆಲ್ಲ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದೆಡೆಗೆ ಕೇಂದ್ರೀಕರಿಸಿದ್ದರೂ, ಆಕೆಯ ವ್ಯವಸ್ಥಾಪಕ ಸಂಸ್ಥೆಯು ಅದಾಗಲೇ ಕೋಟಿಗಟ್ಟಲೆ ಮೌಲ್ಯದ ಒಂದೆರಡು ಜಾಹೀರಾತುಗಳ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಮನು ಭಾಕರ್ ರೂ. 20-25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಈಗಿನ ವರದಿಗಳ ಪ್ರಕಾರ, ಆಕೆಯ ಸಂಭಾವನೆ ಮೊತ್ತವು 6-7 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಈ ಪೈಕಿ ಒಡಂಬಡಿಕೆ ಅಂತಿಮಗೊಂಡಿರುವ ಜಾಹೀರಾತೊಂದಕ್ಕೆ ಮನು ಭಾಕರ್ 1.5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

“ನಾವು ಕಳೆದ ಕೇವಲ ಎರಡು ಮೂರು ದಿನಗಳಲ್ಲಿ 40ಕ್ಕೂ ಹೆಚ್ಚು ವಿಚಾರಣೆಗಳನ್ನು ಸ್ವೀಕರಿಸಿದ್ದೇವೆ. ನಾವೀಗ ದೀರ್ಘಕಾಲೀನ ಪಾಲುದಾರಿಕೆ ಒಪ್ಪಂದಗಳತ್ತ ಗಮನ ಹರಿಸಿದ್ದು, ಒಂದೆರಡು ಒಪ್ಪಂದಗಳನ್ನು ಅಂತಿಮಗೊಳಿಸಿದ್ದೇವೆ” ಎಂದು ಮನು ಭಾಕರ್ ಅವರ ವ್ಯವಹಾರವನ್ನು ನಿಭಾಯಿಸುತ್ತಿರುವ ಐಒಎಸ್ ಸ್ಪೋರ್ಟ್ಟ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ನೀರವ್ ತೋಮರ್ Times of India ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಿರಾಶೆಯ ನಂತರ ಸರಿಯಾದ ಹಾದಿಯಲ್ಲಿರುವಂತೆ ತೋರುತ್ತಿರುವ ಮನು ಭಾಕರ್, ಕಳೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು, ರಾಷ್ಟ್ರೀಯ ಕ್ರೀಡಾ ಸಂಕೇತವಾಗಿ ಪರಿವರ್ತನೆಗೊಂಡಿರುವ ನೀರಜ್ ಚೋಪ್ರಾರ ನಂತರ ತಾವೂ ಆ ಸ್ಥಾನ ಅಲಂಕರಿಸುವುದರತ್ತ ಮುನ್ನಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News