ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಚೆಫ್-ಡಿ-ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ ಮೇರಿ ಕೋಮ್
ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್ ಅವರು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚೆಫ್-ಡಿ-ಮಿಷನ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿರುವ ಅವರು ತಮಗೆ ಬೇರೆ ಆಯ್ಕೆಯಿಲ್ಲ ಎಂದಿದ್ದಾರೆ.
ಈ ಸ್ಥಾನದಿಂದ ತಮ್ಮನ್ನು ಕೈಬಿಡುವಂತೆ ಮೇರಿ ಕೋಮ್ ತಮಗೆ ಪತ್ರ ಬರೆದಿದ್ದಾರೆಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ ಟಿ ಉಷಾ ಹೇಳಿದ್ದಾರೆ.
“ನನ್ನ ದೇಶಕ್ಕೆ ಯಾವುದೇ ರೀತಿಯಲ್ಲಿ ಸೇವೆ ಸಲ್ಲಿಸುವುದು ಗೌರವವೆಂದು ತಿಳಿಯುತ್ತೇನೆ, ಮತ್ತು ಅದಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೆ. ಆದರೆ ಈ ಪ್ರತಿಷ್ಠಿತ ಜವಾಬ್ದಾರಿಯನ್ನು ನಿರ್ವಹಿಸಲು ನನಗೆ ಸಾಧ್ಯವಾಗದು, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಲು ಬಯಸಿದ್ದೇನೆ,” ಎಂದು 41 ವರ್ಷದ ಮೇರಿ ಕೋಮ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ನೀಡಲಾದ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಮುಜುಗರಕಾರಿ, ನಾನು ಹಾಗೆ ಹೆಚ್ಚಾಗಿ ಮಾಡುವುದಿಲ್ಲ. ಆದರೆ ನನಗೆ ಬೇರೆ ಆಯ್ಕೆಯಿಲ್ಲ. ಆದರೆ ನನ್ನ ದೇಶ ಮತ್ತು ಅದರ ಅಥ್ಲೀಟುಗಳನ್ನು ಹುರಿದುಂಬಿಸಲು ನಾನಿರುತ್ತೇನೆ,” ಎಂದು ಆಕೆ ಬರೆದಿದ್ದಾರೆ.
ಅವರನ್ನು ಚೆಫ್-ಡಿ-ಮಿಷನ್ ಆಗಿ ಐಒಎ ಮಾರ್ಚ್ 21ರಂದು ನೇಮಕಗೊಳಿಸಿತ್ತು. 2012 ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿರುವ ಮೇರಿ ಕೋಮ್ ಅವರು ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶದ ತಂಡದ ಲಾಜಿಸ್ಟಿಕಲ್ ಇನ್-ಚಾರ್ಜ್ ಆಗಬೇಕಿತ್ತು.
ಅವರ ಸ್ಥಾನದಲ್ಲಿ ಯಾರನ್ನು ನೇಮಿಸಬೇಕು ಎಂಬ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಉಷಾ ಹೇಳಿದ್ದಾರೆ.