ಕೋಲ್ಕತ ಕ್ರಿಕೆಟ್ ಲೀಗ್ ನಲ್ಲಿ ಮ್ಯಾಚ್-ಫಿಕ್ಸಿಂಗ್
ಕೋಲ್ಕತ : ಬಂಗಾಳ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ)ನ ಪ್ರಥಮ ದರ್ಜೆ ಲೀಗ್ ನ ಪಂದ್ಯವೊಂದರ ಫಲಿತಾಂಶವು ಪೂರ್ವ ನಿಗದಿತವಾಗಿರುವಂತೆ ಕಂಡುಬರುತ್ತಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ಶ್ರೀವತ್ಸ ಗೋಸ್ವಾಮಿ ಗುರುವಾರ ಆರೋಪಿಸಿದ್ದಾರೆ. ಪಂದ್ಯದಲ್ಲಿ ಕೆಲವರು ಔಟಾದ ರೀತಿಯನ್ನು ಗಮನಿಸಿದಾಗ ಈ ಸಂಶಯ ಉಂಟಾಗುತ್ತದೆ ಎಂದು 2008ರಲ್ಲಿ ಅಂಡರ್-19 ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರೂ ಆಗಿದ್ದ ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಹಮ್ಮದನ್ ಸ್ಪೋರ್ಟಿಂಗ್ ಮತ್ತು ಟೌನ್ ಕ್ಲಬ್ ನಡುವೆ ನಡೆದ ಪಂದ್ಯವೊಂದರ ವೀಡಿಯೊಗಳನ್ನು ಗೋಸ್ವಾಮಿ ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಮುಹಮ್ಮದನ್ ಸ್ಪೋರ್ಟಿಂಗ್ ತಂಡದ ಬ್ಯಾಟರ್ಗಳು ಉದ್ದೇಶಪೂರ್ವಕವಾಗಿ ಔಟಾದಂತೆ ಕಂಡುಬಂದರು. ಇದರಿಂದಾಗಿ ಟೀಮ್ ಇಂಡಿಯಾದ ಮಾಜಿ ಮ್ಯಾನೇಜರ್ ದೇಬಬ್ರತ ದಾಸ್ರೊಂದಿಗೆ ನಂಟು ಹೊಂದಿರುವ ಟೌನ್ ಕ್ಲಬ್ಗೆ ಏಳು ಅಂಕಗಳು ಲಭಿಸಿವೆ. ದಾಸ್ ಸಿಎಬಿಯ ಹಾಲಿ ಕಾರ್ಯದರ್ಶಿಯೂ ಆಗಿದ್ದಾರೆ. 2022ರ ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ, ದಾಸ್ ಭಾರತೀ ಕ್ರಿಕೆಟ್ ತಂಡದ ಆಡಳಿತಾತ್ಮಕ ಮ್ಯಾನೇಜರ್ ಆಗಿದ್ದರು.
ಈ ವಿಷಯದಲ್ಲಿ ಅಂಪಯರ್ಗಳು ಮತ್ತು ವೀಕ್ಷಕರ ವರದಿಯನ್ನು ಕೇಳಿದ್ದೇವೆ ಎಂದು ಸಿಎಬಿ ಅಧ್ಯಕ್ಷ ಸ್ನೇಹಶೀಶ್ ಗಂಗುಲಿ ಹೇಳಿದ್ದಾರೆ.
‘‘ಈ ವಿಷಯದ ಬಗ್ಗೆ ಚರ್ಚಿಸಲು ನಾವು ಮಾರ್ಚ್ 2ರಂದು ಟೂರ್ನಮೆಂಟ್ ಸಮಿತಿಯ ಸಭೆಯನ್ನು ಕರೆದಿದ್ದೇವೆ’’ ಎಂದು ಅವರು ತಿಳಿಸಿದರು.