ಇನ್ನುಳಿದ ಐಪಿಎಲ್ ಪಂದ್ಯಗಳಿಂದ ಮಯಾಂಕ್ ಯಾದವ್ ಹೊರಗೆ

Update: 2024-05-04 17:05 GMT

ಮಯಾಂಕ್ ಯಾದವ್ | PC : NDTV 

ಲಕ್ನೋ: ವೇಗದ ಬೌಲರ್ ಮಯಾಂಕ್ ಯಾದವ್ ಇನ್ನುಳಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಲ್ಲಿ ಆಡಲು ಲಭ್ಯರಿರುವುದಿಲ್ಲ ಎಂದು ಲಕ್ನೋ ಸೂಪರ್ ಜಯಂಟ್ಸ್ (ಎಲ್‍ಎಸ್‍ಜಿ) ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಶನಿವಾರ ತಿಳಿಸಿದ್ದಾರೆ.

ವೇಗವಾಗಿ ಚೆಂಡುಗಳನ್ನು ಬೌಲ್ ಮಾಡುವ ಮೂಲಕ ಐಪಿಎಲ್ ಪಂದ್ಯಗಳಲ್ಲಿ ರೋಮಾಂಚನ ಉಂಟು ಮಾಡಿರುವ ಎಳೆಯ ವೇಗಿ ಕಿಬ್ಬೊಟ್ಟೆಯ ಗಾಯದಿಂದ ಬಳಲುತ್ತಿದ್ದಾರೆ.

ಮಯಾಂಕ್‍ರ ದೈಹಿಕ ಕ್ಷಮತೆ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲ್ಯಾಂಗರ್, “ಅವರು ಪ್ಲೇ-ಆಫ್‍ನಲ್ಲಾದರೂ ಆಡಲು ಸಮರ್ಥವಾಗಲಿ ಎಂಬುದಾಗಿ ನಾವು ಪ್ರಾರ್ಥಿಸುತ್ತಿದ್ದೇವೆ. ಆದರೆ, ನಾನು ವಾಸ್ತವವಾದಿಯೂ ಹೌದು. ಪಂದ್ಯಾವಳಿಯ ಕೊನೆಯ ಭಾಗದಲ್ಲಿ ಅವರು ಬೌಲ್ ಮಾಡಲು ಸಮರ್ಥರಾಗುವುದು ಕಷ್ಟ ಎಂದು ಅನಿಸುತ್ತದೆ’’ ಎಂದು ಹೇಳಿದರು.

ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೌಲ್ ಮಾಡುವ ಮೂಲಕ ಸುದ್ದಿಯಾಗಿರುವ ಮಯಾಂಕ್, ಈವರೆಗೆ ನಾಲ್ಕು ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು ಏಳು ವಿಕೆಟ್‍ಗಳನ್ನು ಉರುಳಿಸಿದ್ದಾರೆ.

ಆದರೆ, ಆ ಪೈಕಿ ಎರಡು ಪಂದ್ಯಗಳಲ್ಲಿ ತನ್ನ ಪಾಲಿನ ಬೌಲಿಂಗ್ ಕೋಟವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ಮೊದಲ ಬಾರಿ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ಕೇವಲ ಒಂದು ಓವರ್ ಬೌಲ್ ಮಾಡಿದ ಬಳಿಕ ಮಯಾಂಕ್ ಪಕ್ಕೆಲುಬು ನೋವಿಗೆ ಒಳಗಾದರು. ಬಳಿಕ ಅವರು ಮೈದಾನದಿಂದ ಹೊರಹೋದರು.

ನಾಲ್ಕು ವಾರಗಳ ವಿಶ್ರಾಂತಿಯ ಬಳಿಕ ಮಯಾಂಕ್, ಮುಂಬೈ ಇಂಡಿಯನ್ಸ್ ವಿರುದ್ಧ ಆಡಲು ಮರಳಿದರು. ಆದರೆ, 3.1 ಓವರ್‍ಗಳನ್ನು ಬೌಲ್ ಮಾಡಿದ ಬಳಿಕ ಅವರು ಮತ್ತೊಮ್ಮೆ ಗಾಯಕ್ಕೆ ಒಳದಾದರು.

ಈ ಹಿಂದೆ ಗಾಯಗೊಂಡಿದ್ದ ಸ್ಥಳದಲ್ಲೇ ಅವರು ಮತ್ತೊಮ್ಮೆ ಗಾಯಗೊಂಡಿದ್ದಾರೆ ಎಂದು ಲ್ಯಾಂಗರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News