ವಿಶ್ವ ವೇಟ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದ ಮೀರಾಬಾಯಿ ಚಾನು

Update: 2024-11-27 15:16 GMT

ಮೀರಾಬಾಯಿ ಚಾನು | NDTV 

ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಬಹ್ರೈನ್‌ನ ಮನಾಮದಲ್ಲಿ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದು, ತನ್ನ ಚೇತರಿಕೆಯತ್ತ ಹೆಚ್ಚು ಗಮನ ನೀಡಲು ಬಯಸಿದ್ದಾರೆ.

ಆಗಸ್ಟ್‌ನಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ 30ರ ಹರೆಯದ ಮಾಜಿ ವಿಶ್ವ ಚಾಂಪಿಯನ್ ಚಾನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೀರಾಬಾಯಿ ಅವರು ಈಗಲೂ ಪುನಶ್ಚೇತನ ಶಿಬಿರದಲ್ಲಿದ್ದು, ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮುಖ್ಯ ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಏಶ್ಯನ್ ಗೇಮ್ಸ್‌ನಲ್ಲಿ ಗಾಯಗೊಂಡ ನಂತರ ಪ್ಯಾರಿಸ್ ಗೇಮ್ಸ್‌ಗೆ ಸರಿಯಾಗಿ ಚೇತರಿಸಿಕೊಳ್ಳಲು ಚಾನು ಸಾಕಷ್ಟು ಶ್ರಮಿಸಿದ್ದರು. ಗಾಯದ ಸಮಸ್ಯೆಯ ಹೊರತಾಗಿಯೂ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದರು.

ಸಂಪೂರ್ಣವಾಗಿ ಚೇತರಿಸಿಕೊಳ್ಳುವುದು ಚಾನುವಿಗೆ ನಿರ್ಣಾಯಕವಾಗಿದೆ. ನಮಗೆ 2026ರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ಗೆ ತಯಾರಿ ನಡೆಸುವ ಅಗತ್ಯವಿದೆ ಎಂದು ವಿಜಯ್ ಶರ್ಮಾ ಹೇಳಿದ್ದಾರೆ.

ಚಾನು ಅವರ ಅನುಪಸ್ಥಿತಿಯಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತೆ ಜ್ಞಾನೇಶ್ವರಿ ಯಾದವ್ ಡಿಸೆಂಬರ್ 6ರಿಂದ ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರ ಸವಾಲನ್ನು ಮುನ್ನಡೆಸಲಿದ್ದಾರೆ. 21ರ ಹರೆಯದ ಜ್ಞಾನೇಶ್ವರಿ ಯಾದವ್ 49 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ(55 ಕೆಜಿ)ಹಾಗೂ ರಾಷ್ಟ್ರೀಯ ಚಾಂಪಿಯನ್ ದಿತಿಮೋನಿ ಸೋನೊವಾಲ್(64 ಕೆಜಿ)ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಇನ್ನಿಬ್ಬರು ಲಿಫ್ಟರ್‌ಗಳಾಗಿದ್ದಾರೆ.

ಹೊಸ ತಲೆಮಾರಿನ ಲಿಫ್ಟರ್‌ಗಳು ಹೊರಹೊಮ್ಮುತ್ತಿದ್ದು, ಅವರೆಲ್ಲರೂ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಹೊಸಬರಿಗೆ ವಿಶ್ವ ಶ್ರೇಷ್ಠ ಲಿಫ್ಟರ್‌ಗಳ ವಿರುದ್ಧ ಸ್ಪರ್ಧಿಸುವ ಅವಕಾಶ ಲಭಿಸಿದೆ ಎಂದು ಕೋಚ್ ವಿಜಯ್ ಶರ್ಮಾ ಹೇಳಿದ್ದಾರೆ.

ಮೂವರು ಲಿಫ್ಟರ್‌ಗಳು ಸದ್ಯ ಪಟಿಯಾಲದ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಡೆಸುತ್ತಿದ್ದು, ಮುಂದಿನ ವಾರದ ಆರಂಭದಲ್ಲಿ ಬಹರೈನ್‌ಗೆ ನಿರ್ಗಮಿಸಲಿದ್ದಾರೆ.

*ಭಾರತದ ಮಹಿಳೆಯರ ತಂಡ:

ಜ್ಞಾನೇಶ್ವರಿ ಯಾದವ್(49ಕೆಜಿ), ಬಿಂದ್ಯಾರಾಣಿ ದೇವಿ(55 ಕೆಜಿ), ದಿತಿಮೋನಿ ಸೋನೊವಾಲ್(64 ಕೆಜಿ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News