ಒಂದು ವೇಳೆ ಬಿಜೆಪಿಗೆ ಸೇರಿದ್ದಲ್ಲಿ ನಾಡಾ ಅಮಾನತು ಆದೇಶ ವಾಪಸ್ ಪಡೆಯಲಿದೆ : ಪುನಿಯಾ ವ್ಯಂಗ್ಯ
ಹೊಸದಿಲ್ಲಿ :ಕುಸ್ತಿ ಸ್ಪರ್ಧೆಯಿಂದ ನಾಲ್ಕು ವರ್ಷಗಳ ಅವಧಿಗೆ ತನ್ನನ್ನು ಅಮಾನತುಗೊಳಿಸಿದ ನಾಡಾದ ಕ್ರಮವನ್ನು ಒಲಿಂಪಿಕ್ ಪ್ರಶಸ್ತಿ ವಿಜೇತ ಕ್ರೀಡಾಪಟು ಬಜರಂಗ ಪುನಿಯಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದು ತನಗೆ ಆಘಾತಕಾರಿಯೆನಿಸುವುದಿಲ್ಲ. ಇದೇನೂ ಆಘಾತಕಾರಿಯಲ್ಲ. ಒಂದು ವೇಳೆ ನಾನು ಬಿಜೆಪಿಗೆ ಸೇರ್ಪಡೆಗೊಂಡಲ್ಲಿ ನನ್ನ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲಾಗುತ್ತದೆ ಎಂದವರು ವ್ಯಂಗ್ಯವಾಡಿದ್ದಾರೆ.
‘‘ ಕಳೆದ ಒಂದು ವರ್ಷದಿಂದ ಈ ಕುರಿತಾಗಿ ವಿಚಾರಣೆ ನಡೆಯುತ್ತಿದೆ. ಈ ಹಿಂದೆಯೂ ನಾಡಾಗೆ ನಾನು ಸ್ಯಾಂಪಲ್ ನೀಡಲು ನಿರಾಕರಿಸಿರಲಿಲ್ಲ. ಅವರು 2023ರ ಡಿಸೆಂಬರ್ 23ರಂದು ಉದ್ದೀಪನದ್ರವ್ಯ ಸೇವನೆ ಪರೀಕ್ಷೆಯನ್ನು ನಡೆಸಲು ವಾಯಿದೆ ಮೀರಿದ ಕಿಟ್‌ನೊಂದಿಗೆ ನನ್ನ ಮನೆಗೆ ಆಗಮಿಸಿದ್ದರು. ನಾಡಾದ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಂಡದ ಇತರ ಸದಸ್ಯರು ಕೂಡಾ ಇದ್ದರು. ಅವರು 2020,2021 ಮತ್ತು 2022ನೇ ಇಸವಿಗೆ ವಾಯಿದೆ ಮುಗಿದಿದ್ದ ಪರೀಕ್ಷಾ ಕಿಟ್‌ಗಳನ್ನು ತಂದಿದ್ದರು’’ ಎಂದು ಪುನಿಯಾ ಆಪಾದಿಸಿದ್ದಾರೆ. ಈ ವಿಷಯವನ್ನು ತಾನು ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿದ್ದಾಗಿ ಪುನಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.
‘‘ನಾನು ನನ್ನ ಮೂತ್ರದ ಮಾದರಿಯನ್ನು ನೀಡಿದ್ದೆ. ಆನಂತರ ನನ್ನ ತಂಡವು ಕಿಟ್‌ನ ಪರೀಕ್ಷೆ ನಡೆಸಿದಾಗ, ಅದರ ವಾಯಿದೆ ಮುಗಿದಿರುವುದು ಕಂಡುಬಂತು. ಹೀಗಾಗಿ ನಾವು ಕಿಟ್ ಅನ್ನು ವೀಡಿಯೊ ಮಾಡಿ, ನಾಡಾಗೆ ಕಳುಹಿಸಿದೆವು. ಈ ಪ್ರಮಾದದ ಬಗ್ಗೆ ಮಾಹಿತಿ ನೀಡುವಂತೆಯೂ ಅವರಿಗೆ ಮನವಿ ಮಾಡಿದೆವು. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿಲ್ಲ’’ ಎಂದು ಪುನಿಯಾ ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ನ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ತನ್ನ ವಿರುದ್ಧ ಸೇಡುತೀರಿಸಲಾಗುತ್ತಿದೆ ಎಂದವರು ಆರೋಪಿಸಿದ್ದಾರೆ.
ಉದ್ದೀಪನ ದ್ರವ್ಯ ಸೇವನೆ ನಿಯಂತ್ರಣ ಕುರಿತ ವಿಧಿವಿಧಾನಗಳನ್ನು ಅನುಸರಿಸುವ ಸಂದರ್ಭಲ್ಲಿ ನಾಡಾವು ತನಗೆ ತಾರತಮ್ಯ ಮಾಡಿದೆ ಹಾಗೂ ನ್ಯಾಯಯುತವಲ್ಲದ ರೀತಿಯಲ್ಲಿ ವರ್ತಿಸಿದೆ ಎಂದು ಬಜರಂಗ ಪುನಿಯಾ ಅವರು ಆಪಾದಿಸುತ್ತಾ ಬಂದಿದ್ದಾರೆ.
ಉದ್ದೀಪನ ದ್ರವ್ಯ ಸೇವನೆ ಪತ್ತೆ ಪರೀಕ್ಷೆಗಾಗಿ ಮಾದರಿಯನ್ನು ಒದಗಿಸಲು ತಾನು ಯಾವತ್ತೂ ನಿರಾಕರಿಸಲಿಲ್ಲ. ಆದರೆ 2023ರ ಡಿಸೆಂಬರ್‌ನಲ್ಲಿ ತನ್ನ ಸ್ಯಾಂಪಲ್‌ಗಳ ಪರೀಕ್ಷೆಗೆ, ಕಾಲಾವಧಿ ಮೀರಿದ ಪರೀಕ್ಷಾ ಕಿಟ್‌ಗಳನ್ನು ಬಳಸಿರುವ ಕುರಿತು ನಾಡಾದಿಂದ ತಾನು ಸ್ಪಷ್ಟೀಕರಣವನ್ನು ಕೋರಿದ್ದಾಗಿ ಪುನಿಯಾ ತಿಳಿಸಿದ್ದಾರೆ.
ಆದರೆ ನಾಡಾವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಸಮಿತಿಯ ಅಧ್ಯಕ್ಷ/ಡಿಸಿಓ ಅವರು ಸಮರ್ಪಕ ರೀತಿಯಲ್ಲಿ ಬಜರಂಗ್ ಪುನಿಯಾ ಅವರನ್ನು ಸಂಪರ್ಕಿಸಿದ್ದರು ಹಾಗೂ ಉದ್ದೀಪನ ದ್ರವ್ಯ ಸೇವನೆಯನ್ನು ಪರೀಕ್ಷಿಸಲು ಮೂತ್ರದ ಮಾದರಿಯನ್ನು ಒದಗಿಸುವ ಅಗತ್ಯವಿದೆಯೆಂದು ಅವರಿಗೆ ತಿಳಿಸಲಾತ್ತೆಂದು ಅದು ಹೇಳಿದೆ.
‘‘ 2021ರ ಉದ್ದೀಪನ ದ್ರವ್ಯ ಸೇವನೆ ನಿಯಮಾವಳಿಯ 20.1 ಹಾಗೂ 20.2 ಕಲಮುಗಳಲ್ಲಿ ಉಲ್ಲೇಖಿಸಲಾದ ಕರ್ತವ್ಯಗಳನ್ನು ಹಾಗೂ ಹೊಣೆಗಾರಿಕೆಗಳ ಬಗ್ಗೆ ಅತ್ಲೀಟ್ (ಬಜರಂಗ್ ಪುನಿಯಾ) ತೀವ್ರವಾದ ಅನಾದರವನ್ನು ಪ್ರದರ್ಶಿಸಿದ್ದಾರೆ’’ ಎಂದು ನಾಡಾ ಹೇಳಿದೆ.
2020ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುನಿಯಾ ಅವರು ಕಂಚಿನ ಪದಕ ಗೆದ್ದಿದ್ದರು.
►ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ನಾವು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರು (ಕೇಂದ್ರ ಸರಕಾರ) ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನಾನು ಕಳೆದ 10-12 ವರ್ಷಗಳಿಂದ ಕುಸ್ತಿ ಕ್ರೀಡೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದೇನೆ. ಎಲ್ಲಾ ಟೂರ್ನಮೆಂಟ್‌ಗಳ ಸಂದರ್ಭದಲ್ಲೂ ನಾನು ಸ್ಯಾಂಪಲ್ ನೀಡಿದ್ದೆ. ನಮ್ಮನ್ನು ಒಡೆಯುವುದು ಮತ್ತು ನಮ್ಮನ್ನು ಮಣಿಸುವುದೇ ಕೇಂದ್ರ ಸರಕಾರದ ಉದ್ದೇಶವಾಗಿದೆ.
ಬಜರಂಗ್ ಪುನಿಯಾ
►4 ವರ್ಷ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ
ನಾಡಾದ ಅಮಾನತು ಆದೇಶದಿಂದಾಗಿ ಬಜರಂಗ ಪುನಿಯಾ ಅವರು 2028ರ ಎಪ್ರಿಲ್ 22ರವರೆಗೆ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ ಅಥವಾ ವಿದೇಶದಲ್ಲಿ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.