ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ; ಇಶಾನ್ ಕಿಶನ್ ಅಲಭ್ಯತೆಗೆ ಆಯಾಸವೇ ಕಾರಣ: ವರದಿ

Update: 2023-12-23 17:00 GMT

Photo: instagram.com/ishankishan23/

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 26ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹೊರಗುಳಿಯಲಿದ್ದಾರೆ ಎಂದು ಕಳೆದ ರವಿವಾರ ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿತ್ತು.

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕಿಶನ್ ಕೋರಿದ್ದರು. ಕ್ರಿಕೆಟ್ ಮಂಡಳಿಯು ಕಿಶನ್ ಕೋರಿಕೆಯನ್ನು ಮನ್ನಿಸಿತ್ತು.

ಆದರೆ ಇದೀಗ ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವರದಿಯ ಪ್ರಕಾರ ಕಿಶನ್ ಅವರು ಭಾರತೀಯ ಕ್ರಿಕೆಟ್ ತಂಡದೊಂದಿಗೆ ನಿರಂತರವಾಗಿ ಪ್ರಯಾಣಿಸಿ ಆಯಾಸಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ.

ಕಳೆದ ಒಂದು ವರ್ಷದಿಂದ ಕ್ರಿಕೆಟ್ ತಂಡದೊಂದಿಗೆ ಬಿಡುವಿಲ್ಲದೆ ಪ್ರಯಾಣಿಸುತ್ತಿರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ತನಗೆ ವಿಶ್ರಾಂತಿ ನೀಡಬೇಕೆಂದು ಕಿಶನ್ ಕಳೆದ ವಾರ ಭಾರತೀಯ ಟೀಮ್ ಮ್ಯಾನೇಜ್ಮೆಂಟ್ಗೆ ವಿನಂತಿಸಿದ್ದರು ಎಂದು ವರದಿ ತಿಳಿಸಿದೆ.

ಟೀಮ್ ಮ್ಯಾನೇಜ್ಮೆಂಟ್ ಆಯ್ಕೆಗಾರರೊಂದಿಗೆ ಮಾತನಾಡಿದ್ದು, ಅವರು ಕಿಶನ್ ಅವರ ಕೋರಿಕೆಯನ್ನು ಒಪ್ಪಿಕೊಂಡಿದ್ದಾರೆ.

ನಾನು ತುಂಬಾ ದಣಿದಿದ್ದು, ಕ್ರಿಕೆಟ್ನಿಂದ ಸ್ವಲ್ಪ ಸಮಯ ವಿರಾಮ ಪಡೆಯಲು ಬಯಸಿದ್ದೇನೆ ಎಂದು ಕಿಶನ್ ಅವರು ಟೀಮ್ ಮ್ಯಾನೇಜ್ಮೆಂಟ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಯೊಬ್ಬರೂ ಒಪ್ಪಿಗೆ ನೀಡಿದರು ಎಂದು ವರದಿ ಉಲ್ಲೇಖಿಸಿದೆ.

ಕಿಶನ್ ಸಹಿತ ಭಾರತೀಯ ಕ್ರಿಕೆಟ್ ತಂಡದ ಪ್ರತಿಯೊಬ್ಬರೂ 2023ರ ಜನವರಿ 3ರಿಂದ ಬಿಡುವಿಲ್ಲದೆ ಪ್ರಯಾಣಿಸುತ್ತಿದ್ದಾರೆ. ಕಿಶನ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಅಗ್ರ ಸರದಿಯಲ್ಲಿ ಆಡಿದ್ದರು. ಆ ನಂತರ ಶುಭಮನ್ ಗಿಲ್ ಡೆಂಗಿಯಿಂದ ಚೇತರಿಸಿಕೊಂಡು ವಾಪಸಾದರು. ಕೆಎಲ್ ರಾಹುಲ್ ವಿಕೆಟ್ಕೀಪಿಂಗ್ ಹೊಣೆ ಹೊತ್ತುಕೊಂಡರು. ವಿಶ್ವಕಪ್ ನಂತರ ಕಿಶನ್ ಅವರು ಆಸ್ಟ್ರೇಲಿಯ ವಿರುದ್ಧ ಮೊದಲ ಮೂರು ಟಿ-20 ಪಂದ್ಯಗಳನ್ನು ಆಡಿದ್ದರು. ಎರಡು ಅರ್ಧಶತಕಗಳನ್ನು ಗಳಿಸಿದ್ದರು.

ಕಿಶನ್ ದಕ್ಷಿಣ ಆಫ್ರಿಕಾದಲ್ಲಿ ಟಿ-20 ಸರಣಿಯಲ್ಲಿ ಆಡಿದ್ದರು. ಟೀಮ್ ಮ್ಯಾನೇಜ್ಮೆಂಟ್ ಜಿತೇಶ್ ಶರ್ಮಾರನ್ನು ಆಯ್ಕೆ ಮಾಡಿದ ನಂತರ ಕಿಶನ್ ಟೆಸ್ಟ್ ತಂಡದ ಸದಸ್ಯನಾಗಿದ್ದರೂ ವಿರಾಮ ಪಡೆಯಲು ನಿರ್ಧರಿಸಿದ್ದರು.

ಬಿಸಿಸಿಐ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ನ್ಯೂಝಿಲ್ಯಾಂಡ್ ವಿರುದ್ಧ ತಲಾ 3 ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿಯ ನಂತರ, ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ತಲಾ 3 ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿಯು ಜನವರಿ 3ರಿಂದ 15ರ ತನಕ ನಡೆಯಲಿದೆ.

ಭಾರತ ತಂಡ ಸ್ವದೇಶದಲ್ಲಿ ಆಸ್ಟ್ರೇಲಿಯದ ವಿರುದ್ಧ ಫೆಬ್ರವರಿ 9ರಿಂದ ಮಾ.22ರ ತನಕ ಆಡಿದಾಗ ಕಿಶನ್ ತಂಡದಲ್ಲಿದ್ದರು. ಆಸೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಕೇವಲ 1 ಪಂದ್ಯ ಆಡಿದ್ದರು. ಎಲ್ಲ 4 ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಪಡೆಯಲಿಲ್ಲ. ಟೀಮ್ ಮ್ಯಾನೇಜ್ಮೆಂಟ್ ಕೆ.ಎಸ್. ಭರತ್ರನ್ನು ಆಯ್ಕೆ ಮಾಡಿತ್ತು.

ಇಡೀ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಕಿಶನ್ ಆ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡಲು ಇಂಗ್ಲೆಂಡ್ಗೆ ಪ್ರಯಾಣಿಸಿದ್ದರು. ಜುಲೈ 12ರಿಂದ ಆಗಸ್ಟ್ 13ರ ತನಕ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದರು. ಆ ಪ್ರವಾಸದಲ್ಲಿ 3 ಏಕದಿನ, 3 ಟಿ-20 ಹಾಗೂ 2 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು.

ವಾರದ ನಂತರ ಕಿಶನ್ರನ್ನು ಶ್ರೀಲಂಕಾದಲ್ಲಿ ಸೆ.22ರಿಂದ 27ರ ತನಕ ನಡೆದಿದ್ದ ಏಶ್ಯಕಪ್ಗೆ ಕಳುಹಿಸಿಕೊಡಲಾಯಿತು. ವಿಶ್ವಕಪ್ಗಿಂತ ಮೊದಲು ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News