ಧೋನಿಯನ್ನು ಗೌರವಿಸುವ ಅವಕಾಶ ತಪ್ಪಿಸಿಕೊಂಡ ಆರ್ ಸಿ ಬಿ ಆಟಗಾರರು | ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ವಾನ್ ಟೀಕೆ
ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯಿಂದ ಸಿ ಎಸ್ ಕೆ ನಿರ್ಗಮಿಸಿದ ನಂತರ ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಎಂ.ಎಸ್. ಧೋನಿ ಹಸ್ತಲಾಘವ ಮಾಡದೆ ನಿರುತ್ಸಾಹದಿಂದ ಮೈದಾನದಿಂದ ಹೊರ ನಡೆದಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿ ಎಸ್ ಕೆ ತಂಡಕ್ಕೆ ನಾಕೌಟ್ ಗೆ ಲಗ್ಗೆ ಇಡಲು 5 ಎಸೆತಗಳಲ್ಲಿ 11 ರನ್ ಬೇಕಾಗಿತ್ತು. ಧೋನಿ ಔಟಾದ ನಂತರ ಸಿ ಎಸ್ ಕೆ ಸೋಲಿನತ್ತ ಮುಖ ಮಾಡಿತು. ರೋಚಕ ಗೆಲುವು ಸಾಧಿಸಿದ ನಂತರ ಆರ್ ಸಿ ಬಿ ಆಟಗಾರರು ಕುಣಿದು ಕುಪ್ಪಳಿಸಿದ್ದರು.
ಪಂದ್ಯ ಮುಗಿದ ನಂತರ ಡಗೌಟ್ನಿಂದ ಹೊರಬಂದಿದ್ದ ಧೋನಿ ಆರ್ ಸಿ ಬಿ ಆಟಗಾರರನ್ನು ಅಭಿನಂದಿಸಲು ಸರದಿ ಸಾಲಿನಲ್ಲಿ ನಿಂತು ಕಾದರು. ಆದರೆ ಸ್ವಲ್ಪ ಸಮಯದ ನಂತರ ಆರ್ ಸಿ ಬಿ ಸಹಾಯಕ ಸಿಬ್ಬಂದಿಯ ಕೈಕುಲುಕಿ ಸಿ ಎಸ್ ಕೆ ಡ್ರೆಸ್ಸಿಂಗ್ ರೂಮ್ ನತ್ತ ತೆರಳಿದರು.
ಆರ್ ಸಿ ಬಿ ಆಟಗಾರರಿಗಾಗಿ ಧೋನಿ ಕಾಯುವಂತಾಗಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಕ್ರಿಕೆಟ್ ನಿರೂಪಕ ಹರ್ಷ ಭೋಗ್ಲೆ, ನೀವು ವಿಶ್ವಕಪ್ ಫೈನಲ್ ನಲ್ಲಿ ಸೋತರೂ ನೀವು ಎದುರಾಳಿಯೊಂದಿಗೆ ಕೈಕುಲುಕುತ್ತೀರಿ. ಇದು ನಮ್ಮ ವೈರತ್ವ ಮುಗಿದಿದೆ ಎಂದು ಸೂಚಿಸುತ್ತದೆ ಎಂದರು.
ಇದು ಎಂ.ಎಸ್.ಧೋನಿ ಅವರ ಕೊನೆಯ ಪಂದ್ಯವಾಗಿದ್ದರೆ ಆರ್ ಸಿ ಬಿ ಆಟಗಾರರು ಹೆಚ್ಚಿನ ಎಚ್ಚರವಹಿಸಬೇಕಾಗಿತ್ತು. ಆರ್ ಸಿ ಬಿ ಆಟಗಾರರು ಗೆದ್ದ ತಕ್ಷಣವೇ ಸಂಭ್ರಮ ಆಚರಿಸುವ ಬದಲು ಲೆಜೆಂಡ್ ಧೋನಿಯ ಕೈಕುಲುಕಲು ಕಾಯಬೇಕಿತ್ತು. ನೀವು ಮೊದಲು ಕೈಕುಲುಕಿ, ನಂತರ ಸಂಭ್ರಮಿಸಿ. ಧೋನಿ ನಿವೃತ್ತಿ ಘೋಷಿಸಿದರೆ ಅವರಿಗೆ ಗೌರವ ತೋರಿಸುವ ಅವಕಾಶ ಕಳೆದುಕೊಂಡಿದ್ದೇವೆ ಎಂದು ಆರ್ ಸಿ ಬಿ ಆಟಗಾರರ ನಾಳೆ ಬೇಸರಿಸಬಾರದು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.