ಐಪಿಎಲ್ | 2025ರಲ್ಲಿ ಸಿ ಎಸ್ ಕೆ ಪರ ಆಡುವೆ : ಧೋನಿ ಸುಳಿವು
ಹೊಸದಿಲ್ಲಿ : ಇನ್ನು ಕನಿಷ್ಠ ಒಂದು ವರ್ಷದ ತನಕ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸುವೆ ಎಂದು ಸುಳಿವು ನೀಡಿರುವ ಎಂ.ಎಸ್. ಧೋನಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಿವಿಗೆ ಇಂಪಾಗುವ ಸುದ್ದಿ ನೀಡಿದ್ದಾರೆ.
ಗೋವಾದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ನಾಯಕ ಧೋನಿ, ತನ್ನ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳನ್ನು ಆನಂದಿಸಲು ಬಯಸಿದ್ದೇನೆ ಎಂದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಮತ್ತೊಮ್ಮೆ ಹಳದಿ ಜರ್ಸಿ ಧರಿಸುವ ಕುರಿತು ಸ್ಪಷ್ಟ ಸೂಚನೆ ನೀಡಿದ್ದಾರೆ.
ಧೋನಿ ಅವರ ಹೆಸರು ಆಟಗಾರರನ್ನು ಉಳಿಸಿಕೊಳ್ಳುವ ಪಟ್ಟಿಯಲ್ಲಿ ಇದೆ ಎಂದು ಸಿಎಸ್‌ಕೆ ತಂಡದ ಸಿಇಒ ಕೆ.ಎಸ್. ವಿಶ್ವನಾಥನ್ ಶನಿವಾರ ಖಚಿತಪಡಿಸಿದ್ದಾರೆ.
ಧೋನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದನ್ನೂ ನಾವು ನೋಡಿದ್ದೇವೆ. ಅವರು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆನಂದಿಸುವುದನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇನ್ನೇನು ಬೇಕು? ನಾವು ಸಂತೋಷವಾಗಿದ್ದೇವೆ. ಅವರು ಅಕ್ಟೋಬರ್ 28 ಅಥವಾ 29ರಂದು ರಾಂಚಿಗೆ ಹಿಂದಿರುಗಿದ ನಂತರ ಅವರೊಂದಿಗೆ ಕುಳಿತು ಚರ್ಚಿಸುತ್ತೇವೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ತನ್ನ ಹರಾಜು ತಂತ್ರ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವ ಯೋಜನೆಗಳ ಕುರಿತು ಟೀಮ್ ಮ್ಯಾನೇಜ್ ಮೆಂಟ್, ಧೋನಿ, ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಜೊತೆಗೆ ವರ್ಚುವಲ್ ಆಗಿ ಭೇಟಿಯಾಗಿ ಚರ್ಚಿಸಲಿದೆ.
ಮುಂದಿನ ತಿಂಗಳು ನಡೆಯಲಿರುವ ಮೆಗಾ ಹರಾಜಿಗಿಂತ ಮೊದಲು ಐಪಿಎಲ್ ತಂಡಗಳು ತಮ್ಮ ಬಳಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರಂದು ಸಲ್ಲಿಸಬೇಕು. ಹೊಸ ನಿಯಮದ ಪ್ರಕಾರ ಸಿಎಸ್ ಕೆ ತಂಡವು ಎಂ.ಎಸ್. ಧೋನಿ ಅವರನ್ನು ಕೇವಲ 4 ಕೋಟಿ ರೂ.ಗೆ ಹೊಸ ಆಟಗಾರನ ರೂಪದಲ್ಲಿ ತನ್ನಲ್ಲೇ ಉಳಿಸಿಕೊಳ್ಳಬಹುದು. ಐದು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರರನ್ನು ಹೊಸ ಆಟಗಾರನೆಂದು ಪರಿಗಣಿಸಬೇಕೆಂದು ನಿಯಮ ರೂಪಿಸಲಾಗಿದೆ.