ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ನನ್ನ ಹೇಳಿಕೆ ನಿಜವಲ್ಲ : ಎ ಬಿ ಡಿ ವಿಲಿಯರ್ಸ್
ಹೊಸದಿಲ್ಲಿ : ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಇನ್ನುಳಿದ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಲಭ್ಯವಿರುವ ಕುರಿತಂತೆ ಸಂಶಯದ ಕಾರ್ಮೋಡ ಕವಿದಿರುವಾಗಲೇ, ಸ್ಟಾರ್ ಬ್ಯಾಟರ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎ ಬಿ ಡಿ ವಿಲಿಯರ್ಸ್ ಇತ್ತೀಚೆಗೆ ಬಾಂಬ್ ಸಿಡಿಸಿದ್ದರು.
ಕೊಹ್ಲಿ ಅವರು ವೈಯಕ್ತಿಕ ಕಾರಣ ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಪ್ರಕಟಿಸಲಾಗಿದ್ದ ಭಾರತ ತಂಡದಿಂದ ಹೊರಗುಳಿದಿದ್ದರು. ಸರಣಿಯ ಉಳಿದ ಪಂದ್ಯಗಳಲ್ಲಿ ಕೊಹ್ಲಿ ಭಾಗವಹಿಸುತ್ತಾರೋ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುತ್ತಿದ್ದ ಡಿವಿಲಿಯರ್ಸ್ ಬಳಿ, ನೀವು ವಿರಾಟ್ ಕೊಹ್ಲಿ ಬಳಿ ಮಾತನಾಡಿದ್ದೀರಾ, ಅವರು ಚೆನ್ನಾಗಿದ್ದಾರೋ, ಇಲ್ಲವೋ ಎಂದು ಕೇಳಲಾಯಿತು.
ಅವರು ಚೆನ್ನಾಗಿದ್ದಾರೆ ಎಂದು ನನಗೆ ಗೊತ್ತು. ಅವರು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಿದ್ದಾರೆ. ನಾನ ಬೇರೆ ಯಾವುದನ್ನೂ ಖಚಿತಪಡಿಸಲಾರೆ. ಕೊಹ್ಲಿ ಚೆನ್ನಾಗಿದ್ದಾರೆ, ಸಂತೋಷವಾಗಿದ್ದಾರೆ ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಹೌದು, ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಕುಟುಂಬದೊಂದಿಗೆ ಕಾಲ ಕಳೆಯುವ ಸಮಯ, ಈ ವಿಷಯ ಅವರಿಗೆ ಮುಖ್ಯವಾಗಿದೆ. ಹೆಚ್ಚಿನ ಜನರ ಆದ್ಯತೆ ಕುಟುಂಬವಾಗಿದೆ ಎಂದು ನಾವು ಭಾವಿಸುತ್ತೇನೆ. ನಾವು ಅವರ ಬ್ಯಾಟಿಂಗ್ ನಿಂದ ವಂಚಿತರಾಗಿದ್ದೇವೆ ನಿಜ. ಆದರೆ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಡಿವಿಲಿಯರ್ಸ್ ಈ ಮೊದಲು ಹೇಳಿದ್ದಾರೆ.
ಇದೀಗ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಡಿವಿಲಿಯರ್ಸ್, ವಿರಾಟ್ ಹಾಗೂ ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ.
ಕುಟುಂಬ ಮೊದಲು ಆ ನಂತರ ಕ್ರಿಕೆಟ್ ಬರುತ್ತದೆ. ನನ್ನ ಯೂ ಟ್ಯೂಬ್ ಚಾನೆಲ್ನಲ್ಲಿ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಆ ಮಾಹಿತಿಯು ತಪ್ಪಾಗಿದೆ. ಅದು ನಿಜವಲ್ಲ. ವಿರಾಟ್ ಕುಟುಂಬದ ಶುಭ ಸುದ್ದಿ ಎಲ್ಲರಿಗೂ ಬೇಗನೆ ಗೊತ್ತಾಗುತ್ತದೆ. ಅವರ ಕುಟುಂಬದೊಳಗೆ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ನಾನು ಅವರಿಗೆ ಶುಭ ಹಾರೈಸುವೆ. ಅವರ ವಿಶ್ರಾಂತಿಗೆ ಕಾರಣ ಏನೇ ಇರಲಿ, ಅವರು ಆದಷ್ಟು ಬೇಗನೆ ಟೀಮ್ ಇಂಡಿಯಾಕ್ಕೆ ಮರಳಬಹುದು ಎಂದು ಭಾವಿಸುತ್ತೇನೆ ಎಂದು ದೈನಿಕ್ ಭಾಸ್ಕರ್ಗೆ ಡಿ ವಿಲಿಯರ್ಸ್ ಹೇಳಿದ್ದಾರೆ.
ಫೆಬ್ರವರಿ 15ರಿಂದ ರಾಜ್ಕೋಟ್ ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತವು ಇನ್ನಷ್ಟೇ ತನ್ನ ತಂಡವನ್ನು ಪ್ರಕಟಿಸಬೇಕಾಗಿದೆ. ಕೊಹ್ಲಿ ಅವರು ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯದ್ದಾರೆ ಎಂದು ವರದಿಯಾಗಿದೆ.