2024ರ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್‌ಗೆ ಕರ್ನಾಟಕ ಆತಿಥ್ಯ

Update: 2024-11-08 15:37 GMT

PC: ANI 

ಬೆಂಗಳೂರು : ಕರ್ನಾಟಕ ಕುಸ್ತಿ ಸಂಸ್ಥೆಯು ಡಿಸೆಂಬರ್ 6ರಿಂದ 8ರ ತನಕ 2024ರ ಆವೃತ್ತಿಯ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಲಿದೆ.

ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಅಮನ್ ಸೆಹ್ರಾವತ್, ಅಂಡರ್-20 ವಿಶ್ವ ಕುಸ್ತಿ ಚಾಂಪಿಯನ್ ಅಂತಿಮ್ ಪಾಂಘಾಲ್, ಸುಜೀತ್, ದೀಪಕ್ ಪುನಿಯಾ, ರೀತಿಕಾ ಹೂಡಾ, ಸೋನಮ್, ರಾಧಿಕಾ, ಮನಿಶಾ, ಬಿಪಾಶಾ, ಪ್ರಿಯಾ, ಉದಿತ್, ಚಿರಾಗ್, ಸುನೀಲ್ ಕುಮಾರ್, ನರೇಂದರ್ ಚೀಮಾ ಸಹಿತ ಭಾರತದ ಪ್ರಮುಖ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.

ಭಾರತದ ಕುಸ್ತಿ ಒಕ್ಕೂಟದ ಆಶ್ರಯದಲ್ಲಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆಯು ನಡೆಯಲಿದೆ. ಚಾಂಪಿಯನ್‌ಶಿಪ್‌ನಲ್ಲಿ ಎಲ್ಲ 25 ಮಾನ್ಯತೆ ಪಡೆದಿರುವ ರಾಜ್ಯ ಸದಸ್ಯ ಘಟಕಗಳು, ರೈಲ್ವೆ ಸ್ಪೋರ್ಟ್ಸ್ ಪ್ರೊಮೊಶನ್ ಬೋರ್ಡ್ ಹಾಗೂ ಸರ್ವಿಸಸ್ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್‌ಗಳ 1,000ಕ್ಕೂ ಅಧಿಕ ಸ್ಪರ್ಧಾಳುಗಳು ಹಾಗೂ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಸ್ಪರ್ಧಾವಳಿಯು ಫ್ರೀಸ್ಟೈಲ್, ಗ್ರೀಕೊ-ರೋಮನ್ ಶೈಲಿ ಹಾಗೂ ಮಹಿಳೆಯರ ಕುಸ್ತಿ ವಿಭಾಗಗಳಲ್ಲಿ ನಡೆಯಲಿದೆ.

ಇದೇ ಮೊದಲ ಬಾರಿ ಕರ್ನಾಟಕದಲ್ಲಿ ಸೀನಿಯರ್ ನ್ಯಾಶನಲ್ ಕುಸ್ತಿ ಚಾಂಪಿಯನ್‌ಶಿಪ್‌ನ್ನು ಆಯೋಜಿಸಲು ಭಾರತದ ಕುಸ್ತಿ ಒಕ್ಕೂಟ ಹೆಮ್ಮೆಪಡುತ್ತಿದೆ. ಭಾರತದ ಎಲ್ಲ ಅಗ್ರ ಕುಸ್ತಿಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಚಾಂಪಿಯನ್‌ಶಿಪ್ ಯಶಸ್ಸು ಗಳಿಸಲು ಕರ್ನಾಟಕ ಕುಸ್ತಿ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

2024ರ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆತಿಥ್ಯ ವಹಿಸುವ ಗೌರವ ಹಾಗೂ ಅವಕಾಶ ಕರ್ನಾಟಕಕ್ಕೆ ಲಭಿಸಿದೆ. ಈ ಸ್ಪರ್ಧೆಯು ದೇಶಾದ್ಯಂತದ ಕುಸ್ತಿಪಟುಗಳ ಅಸಾಧಾರಣ ಕೌಶಲ್ಯ ಹಾಗೂ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲ, ಕ್ರೀಡೆ ಹಾಗೂ ಅತ್ಲೆಟಿಕ್ಸ್‌ಗಳ ಶ್ರೇಷ್ಠತೆಯ ಕೇಂದ್ರವಾಗಿ ಕರ್ನಾಟಕ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ ಹಾಗೂ ಭಾರತದ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News