ಇಂಗ್ಲೆಂಡ್-ಕಿವೀಸ್ ಟೆಸ್ಟ್ ಸರಣಿಗೆ ಗ್ರಹಾಮ್ ತೋರ್ಪ್, ಮಾರ್ಟಿನ್ ಕ್ರೋ ಹೆಸರು

Update: 2024-11-07 16:19 GMT

PC : X \ @SkyCricket

ಕ್ರೈಸ್ಟ್‌ಚರ್ಚ್ : ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ನಡುವಿನ ಟೆಸ್ಟ್ ಸರಣಿಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಗ್ರಹಾಮ್ ತೋರ್ಪ್ ಮತ್ತು ನ್ಯೂಝಿಲ್ಯಾಂಡ್‌ನ ಮಾಜಿ ಕ್ರಿಕೆಟಿಗ ಮಾರ್ಟಿನ್ ಕ್ರೋ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ.

1930ರಲ್ಲಿ ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಉಭಯ ದೇಶಗಳ ನಡುವಿನ ಅಂದಿನಿಂದ ಇಂದಿನವರೆಗಿನ ಸ್ಪರ್ಧೆಗೆ ಈಗ ಹೆಸರೊಂದನ್ನು ಇಡಲು ಯೋಚಿಸಲಾಗಿದೆ. ಈ ಮೂಲಕ ಕ್ರೋ ಮತ್ತು ತೋರ್ಪ್‌ರ ಸಾಧನೆಗಳನ್ನು ಗೌರವಿಸಲು ಉದ್ದೇಶಿಸಲಾಗಿದೆ ಎಂದು ‘ದ ಟೆಲಿಗ್ರಾಫ್’ ವರದಿ ಮಾಡಿದೆ.

ಉಭಯ ದೇಶಗಳ ನಡುವಿನ ಮುಂಬರುವ ಟೆಸ್ಟ್ ಸರಣಿಯು ನವೆಂಬರ್ 28ರಂದು ಆರಂಭಗೊಳ್ಳಲಿದೆ.

ಕ್ರೋ ಅವರನ್ನು ನ್ಯೂಝಿಲ್ಯಾಂಡ್‌ನ ಅತ್ಯುತ್ಕೃಷ್ಟ ಬ್ಯಾಟರ್ ಎಂಬುದಾಗಿ ಪರಿಗಣಿಸಲಾಗಿದೆ. ಅವರು ನ್ಯೂಝಿಲ್ಯಾಂಡ್ ತಂಡವನ್ನು 1982ರಿಂದ 1995ರವರೆಗೆ 77 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿ 45.36ರ ಸರಾಸರಿಯಲ್ಲಿ 5444 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 18 ಅರ್ಧ ಶತಕಗಳಿವೆ.

ನಿವೃತ್ತಿಯ ಬಳಿಕ, ಉತ್ತಮ ಲೇಖಕ ಹಾಗೂ ವೀಕ್ಷಕ ವಿವರಣೆಗಾರರಾಗಿದ್ದ ಅವರು ಶ್ರೇಷ್ಠ ಚಿಂತಕರಾಗಿದ್ದರು. ಅವರು 53ರ ಹರೆಯದಲ್ಲಿ 2016ರಲ್ಲಿ ನಿಧನರಾದರು.

ಇಂಗ್ಲೆಂಡ್‌ ನ ಗ್ರಹಾಂ ತೋರ್ಪ್ 1993-2005ರ ನಡುವಿನ ಅವಧಿಯಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿ 44.7ರ ಸರಾಸರಿಯಲ್ಲಿ 6,744 ರನ್‌ಗಳನ್ನು ಗಳಿಸಿದ್ದಾರೆ. ಅವರು ನ್ಯೂಝಿಲ್ಯಾಂಡ್ ವಿರುದ್ಧ 53.2ರ ಸರಾಸರಿಯನ್ನು ಹೊಂದಿದ್ದಾರೆ. ಅವರು ತನ್ನ 16 ಟೆಸ್ಟ್ ಶತಕಗಳ ಪೈಕಿ ನಾಲ್ಕನ್ನು ನ್ಯೂಝಿಲ್ಯಾಂಡ್ ವಿರುದ್ಧ ಬಾರಿಸಿದ್ದಾರೆ.

ಅವರು ತನ್ನ ಗರಿಷ್ಠ ಟೆಸ್ಟ್ ರನ್ 200ನ್ನು 2002ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಬಾರಿಸಿದ್ದಾರೆ. ಅವರು 2024 ಆಗಸ್ಟ್‌ನಲ್ಲಿ ನಿಧನರಾದರು.

ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಕ್ರೈಸ್ಟ್‌ಚರ್ಚ್‌ನಲ್ಲಿ ನವೆಂಬರ್ 28ರಂದು ಆರಂಭಗೊಳ್ಳಲಿದೆ. ನಂತರದ ಪಂದ್ಯಗಳು ವೆಲಿಂಗ್ಟನ್ ಮತ್ತು ಹ್ಯಾಮಿಲ್ಟನ್‌ಗಳಲ್ಲಿ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News