ರೋಹಿತ್ ಶರ್ಮ ಕುರಿತ ಗಾವಸ್ಕರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆ್ಯರೊನ್ ಫಿಂಚ್

Update: 2024-11-07 11:37 GMT

ರೋಹಿತ್ ಶರ್ಮ | PTI 

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ತಂದೆಯಾಗುತ್ತಿದ್ದು, ಇದರಿಂದಾಗಿ ಅವರು ನವೆಂಬರ್ 22ರಿಂದ ಪರ್ತ್ ನಲ್ಲಿ ಪ್ರಾರಂಭಗೊಳ್ಳಲಿರುವ ಪ್ರಥಮ ಕ್ರಿಕೆಟ್ ಟೆಸ್ಟ್ ಗೆ ಅಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಗಾವಸ್ಕರ್, ಒಂದು ವೇಳೆ ರೋಹಿತ್ ಶರ್ಮ ಏನಾದರೂ ಪ್ರಥಮ ಟೆಸ್ಟ್ ತಪ್ಪಿಸಿಕೊಂಡರೆ, ಅವರು ನಂತರದ ಟೆಸ್ಟ್ ಗಳಲ್ಲಿ ಕೇವಲ ಆಟಗಾರರಾಗಿ ತಂಡಕ್ಕೆ ಮರಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ತಂಡದೆದುರಿನ ಟೆಸ್ಟ್ ಪಂದ್ಯಗಳಿಗೆ ಉಪ ನಾಯಕ ಜಸ್ಪ್ರೀತ್ ಬೂಮ್ರಾರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕಿದೆ ಎಂದೂ ಅವರು ಸಲಹೆ ನೀಡಿದ್ದಾರೆ.

ಆದರೆ, ಗಾವಸ್ಕರ್ ಅಭಿಪ್ರಾಯಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆ್ಯರನ್ ಫಿಂಚ್, ರೋಹಿತ್ ಶರ್ಮ ಕೇವಲ ಆಟಗಾರರಾಗಿ ತಂಡಕ್ಕೆ ಮರಳಬೇಕು ಎಂಬ ಗಾವಸ್ಕರ್ ಅಭಿಪ್ರಾಯ ನ್ಯಾಯಯುತವೇ ಎಂಬ ಪ್ರಶ್ನೆಗೆ, ಇಲ್ಲ ಎಂದು ಉತ್ತರಿಸಿದ್ದಾರೆ.

“ನಾನು ಗಾವಸ್ಕರ್ ಅಭಿಪ್ರಾಯವನ್ನು ಒಪ್ಪುವುದಿಲ್ಲ. ರೋಹಿತ್ ಶರ್ಮ ಭಾರತ ತಂಡದ ನಾಯಕರಾಗಿದ್ದಾರೆ. ನಿಮ್ಮ ಪತ್ನಿ ಮಗುವೊಂದಕ್ಕೆ ಜನ್ಮ ನೀಡುತ್ತಿರುವುದಕ್ಕೆ ನೀವು ತವರಿನಲ್ಲೇ ಉಳಿಯುತ್ತೀರೆಂದರೆ, ಅದೊಂದು ಸುಂದರ ಕ್ಷಣ. ನೀವು ಈ ಸಂಬಂಧ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳಬಹುದು” ಎಂದು ಹೇಳಿದ್ದಾರೆ.

ಈ ಹಿಂದೆ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ನಾಯಕ ವಿರಾಟ್ ಕೊಹ್ಲಿ ತಾವು ತಂದೆಯಾಗುತ್ತಿರುವ ಕಾರಣಕ್ಕೆ ಪ್ರಥಮ ಟೆಸ್ಟ್ ಪಂದ್ಯದ ಮಧ್ಯದಲ್ಲೇ ತವರಿಗೆ ವಾಪಸ್ಸಾಗಿದ್ದರು. ಆ ಪಂದ್ಯದ ಎರಡನೆ ಇನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 36 ರನ್ ಗಳಿಗೆ ಆಲೌಟ್ ಆಗಿತ್ತು.

ನಂತರ, ಎರಡನೆ ಟೆಸ್ಟ್ ಪಂದ್ಯದ ನಾಯಕತ್ವ ವಹಿಸಿದ್ದ ಅಜಿಂಕ್ಯಾ ರಹಾನೆ, ಆ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2025ರ ಜೂನ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ಸ್ ಗೆ ನೇರ ಅರ್ಹತೆ ಪಡೆಯಲು ಭಾರತ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಒತ್ತಡದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News