ಡಬ್ಲ್ಯುಟಿಎ ಫೈನಲ್ಸ್-2024 | ಚೀನಾದ ಝೆಂಗ್ ಸೆಮಿ ಫೈನಲ್ ಗೆ ಲಗ್ಗೆ
ರಿಯಾದ್(ಸೌದಿ ಅರೇಬಿಯ) : ಚೀನಾದ ಝೆಂಗ್ ಕ್ವಿನ್‌ವೆನ್ ಡಬ್ಲ್ಯುಟಿಎ ಫೈನಲ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಝೆಂಗ್ ಅವರು ಇಟಲಿಯ ಜಾಸ್ಮಿನ್ ಪಯೋಲಿನಿ ಅವರನ್ನು 6-1, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಇದೇ ಮೊದಲ ಬಾರಿ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಆಡುತ್ತಿರುವ 22ರ ಹರೆಯದ ಝೆಂಗ್ 2011ರ ನಂತರ ಸೆಮಿ ಫೈನಲ್ ತಲುಪಿದ ಕಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2011ರಲ್ಲಿ ಪೀಟರ್ ಕ್ವಿಟೋವಾ ಈ ಸಾಧನೆ ಮಾಡಿದ್ದರು.
7ನೇ ಶ್ರೇಯಾಂಕದ ಝೆಂಗ್ ಅವರು ವಿಂಬಲ್ಡನ್ ಚಾಂಪಿಯನ್‌ಶಿಪ್ ನಂತರ ಆಡಿರುವ 34 ಪಂದ್ಯಗಳ ಪೈಕಿ 30ನೇ ಗೆಲುವು ದಾಖಲಿಸಿದರು.
ಇದು ಈ ವರ್ಷ ನನ್ನ ಶ್ರೇಷ್ಠ ಪ್ರದರ್ಶನದ ಪೈಕಿ ಒಂದಾಗಿದೆ ಎಂದು ಲಿ ನಾ ನಂತರ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಅಂತಿಮ-4ರ ಹಂತ ತಲುಪಿರುವ ಚೀನಾದ 2ನೇ ಆಟಗಾರ್ತಿಯಾಗಿರುವ ಝೆಂಗ್ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ಪರ್ಪಲ್ ರೌಂಡ್ ರಾಬಿನ್ ಗ್ರೂಪ್‌ನಲ್ಲಿ ಅಗ್ರ ಶ್ರೇಯಾಂಕದ ಅರ್ಯನಾ ಸಬಲೆಂಕಾ ನಂತರ ಎರಡನೇ ಸ್ಥಾನ ಪಡೆದಿದ್ದಾರೆ.
ಸೋಮವಾರ ಪಯೋಲಿನಿ ಅವರನ್ನು 6-3, 7-5 ಅಂತರದಿಂದ ಮಣಿಸಿದ್ದ ಸಬಲೆಂಕಾ ಅವರು ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದರು.
ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಬುಧವಾರ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಎಲೆನಾ ರೈಬಾಕಿನಾ ವಿರುದ್ಧ 4-6, 6-3, 1-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಇದೊಂದು ಕಠಿಣ ಪಂದ್ಯವಾಗಿತ್ತು. ವಿಶ್ವದ ನಂ.1 ಆಟಗಾರ್ತಿಯ ವಿರುದ್ಧ ಕನಿಷ್ಠ ಒಂದು ಗೆಲುವು ಸಾಧಿಸಿ ವರ್ಷವನ್ನು ಮುಗಿಸಿದ್ದಕ್ಕೆ ಖುಷಿಯಾಗುತ್ತಿದೆ. ಸಬಲೆಂಕಾಗೆ ಗೆಲ್ಲುವ ಎಲ್ಲ ಅವಕಾಶಗಳಿದ್ದವು ಎಂದು ರೈಬಾಕಿನಾ ಹೇಳಿದ್ದಾರೆ.
ರೈಬಾಕಿನಾ ಹಾಗೂ ವಿಶ್ವದ ನಂ.2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ 2024ರಲ್ಲಿ ಸಬಲೆಂಕಾ ವಿರುದ್ದ ಹಲವು ಬಾರಿ ಜಯ ಸಾಧಿಸಿದ್ದಾರೆ.