ನಾಳೆ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ ಎರಡು ವಾರಗಳ ನಂತರ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಗುರುವಾರ ಲಾಸನ್ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಸೆಪ್ಟಂಬರ್ 14ರಂದು ಬ್ರುಸ್ಸಲ್ಸ್‌ನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಡೈಮಂಡ್ ಲೀಗ್ ಟ್ರೋಫಿಯನ್ನು ಮತ್ತೆ ಗೆಲ್ಲುವುದು ಚೋಪ್ರಾ ಅವರ ಗುರಿಯಾಗಿದೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಹೊರತಾಗಿಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಟೋಕಿಯೊ ಗೇಮ್ಸ್‌ನ ಐತಿಹಾಸಿಕ ಚಿನ್ನದ ಪದಕಕ್ಕೆ ಮತ್ತೊಂದು ಪದಕ ಸೇರಿಸಿದ್ದರು.
2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದ ಚೋಪ್ರಾ ಕಳೆದ ವರ್ಷದ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 2023ರಲ್ಲಿ ಎವ್‌ಜಿನಿಯಲ್ಲಿ ನಡೆದಿದ್ದ ಫೈನಲ್‌ನಲ್ಲಿ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದರು. ಝೆಕ್ ರಿಪಬ್ಲಿಕ್‌ನ ಜೇಕಬ್ ವಡ್ಲೆಚ್ ಮೊದಲ ಸ್ಥಾನ ಪಡೆದಿದ್ದರು.
ಸದ್ಯ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಚೋಪ್ರಾ ಅವರು ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಸರಣಿಯಲ್ಲಿ ಅಗ್ರ-6ರೊಳಗೆ ಸ್ಥಾನ ಪಡೆಯಬೇಕಾಗಿದೆ. ಗಾಯದ ಕಳವಳದ ಹೊರತಾಗಿಯೂ ಚೋಪ್ರಾ ಅವರು ಒಲಿಂಪಿಕ್ಸ್ ನಂತರ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ತರಬೇತಿ ಆರಂಭಿಸಿದ್ದರು.
ಲಾಸನ್ ಕ್ರೀಡಾಕೂಟದಲ್ಲಿ ಚೋಪ್ರಾ ಅವರು ವಡ್ಲೆಚ್, 2 ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಹಾಗೂ ಜರ್ಮನಿಯ ಜುಲಿಯನ್ ವೆಬೆರ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
ಪಾಕಿಸ್ತಾನದ ಅರ್ಷದ್ ನದೀಮ್ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ. ನದೀಮ್ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು.