ಏಕದಿನ ಕ್ರಿಕೆಟ್ ನಲ್ಲಿ ಹೊಸ ಎರಡು ಚೆಂಡು ಬಳಕೆ ನಿಯಮ : ಗೌತಮ್ ಗಂಭೀರ್ ಟೀಕೆ
ಹೊಸದಿಲ್ಲಿ: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ನಿಯಮದ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತೀವ್ರ ಟೀಕಾಪ್ರಹಾರ ನಡೆಸಿದರು.
ಈ ನಿಯಮವು ಮುಖ್ಯವಾಗಿ ಸ್ಪಿನ್ನರ್ ಗಳಿಗೆ ನಷ್ಟ ಉಂಟು ಮಾಡುತ್ತದೆ ಎಂದು ವಾದಿಸಿದ ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಸದ್ಯ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ್, ಟೆಸ್ಟ್ ಕ್ರಿಕೆಟ್ ನಲ್ಲಿ 400ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದಿರುವ ಹೊರತಾಗಿಯೂ ಪ್ರಮುಖ ಸ್ಪಿನ್ನರ್ ಗಳಾದ ನಾಥನ್ ಲಿಯೊನ್ ಹಾಗೂ ಆರ್.ಅಶ್ವಿನ್ ಏಕದಿನ ತಂಡಗಳಲ್ಲಿ ಆಡುತ್ತಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳ ಬಳಕೆಯು ಬಹುಶಃ ಏಕದಿನ ಕ್ರಿಕೆಟ್ ನಲ್ಲಿ ಸಂಭವಿಸಬಹುದಾದ ಕೆಟ್ಟ ವಿಷಯವಾಗಿದೆ. ಎಷ್ಟು ಫಿಂಗರ್ ಸ್ಪಿನ್ನರ್ ಗಳು ಏಕದಿನ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ ಎಂದು ಊಹಿಸಿ. ತಲಾ 400 ವಿಕೆಟ್ ಗಳನ್ನು ಕಬಳಿಸಿರುವ ನಾಥನ್ ಲಿಯೊನ್ ಹಾಗೂ ಆರ್.ಅಶ್ವಿನ್ ಏಕದಿನ ತಂಡದ ಭಾಗವಾಗಿಲ್ಲ ಎಂದು ಪಾಡ್ಕ್ಯಾಸ್ಟ್ ಸೀರಿಸ್ 180 ನಾಟ್ಔಟ್ ನ ಇತ್ತೀಚೆಗಿನ ಎಪಿಸೋಡ್ ನಲ್ಲಿ ಗಂಭೀರ್ ಹೇಳಿದ್ದಾರೆ.
ಎರಡು ಹೊಸ ಚೆಂಡುಗಳ ನಿಯಮದಿಂದ ವೇಗದ ಬೌಲರ್ ಗಳ ನಿರ್ಣಾಯಕ ಕೌಶಲ್ಯವಾದ ರಿವರ್ಸ್ ಸ್ವಿಂಗ್ ಮೇಲೆ ಪ್ರಭಾವ ಬೀರಲಿದೆ ಎಂದು ಪ್ರತಿಪಾದಿಸಿದ ಗಂಭೀರ್, ರಿವರ್ಸ್ ಸ್ವಿಂಗ್.. ಇದು ಸಂಪೂರ್ಣ ಆಟದಿಂದ ಹೊರಗುಳಿದಿದೆ. ನಾನು ರಿವರ್ಸ್ ಸ್ವಿಂಗ್ ಅನ್ನು ನೋಡಲು ಬಯಸುತ್ತೇನೆ. ಬ್ಯಾಟರ್ ಗಳು ಸವಾಲು ಎದುರಿಸುವುದನ್ನು ನೋಡಲು ಬಯಸುವೆ. ಪ್ರತಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವುದು ಹಾಗೂ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡುವುದು ಯಾವಾಗಲೂ ಸವಾಲಾಗಿದೆ ಎಂದರು.
ಇನಿಂಗ್ಸ್ ನುದ್ದುದ್ದಕ್ಕೂ ಒಂದೇ ಚೆಂಡಿನ ಸಾಂಪ್ರದಾಯಿಕ ಬಳಕೆ ಮುಂದುವರಿಸಲು ಆಗ್ರಹಿಸಿದ ಗಂಭೀರ್, ಇದರಿಂದಾಗಿ ಚೆಂಡಿನಲ್ಲಿ ಸವೆತ ಉಂಟಾಗಿ ರಿವರ್ಸ್ ಸ್ವಿಂಗ್ ಅನ್ನು ಪಡೆಯಬಹುದು. ಸ್ವಿನ್ನರ್ ಗಳಿಗೆ ಆಟದ ಮೇಲೆ ಪ್ರಭಾವ ಬೀರಲು ಹೆಚ್ಚಿನ ಅವಕಾಶ ಒದಗಿಸುತ್ತದೆ. ಎರಡು ಹೊಸ ಚೆಂಡು ನಿಯಮವನ್ನು ಬದಲಾಯಿಸಬೇಕು. ಕೇವಲ ಒಂದು ಚೆಂಡನ್ನು ಮಾತ್ರ ಬಳಸಬೇಕು ಎಂದರು.