ಒಂದೂ ಎಸೆತ ಕಾಣದೆ ನ್ಯೂಝಿಲ್ಯಾಂಡ್-ಅಫ್ಘಾನಿಸ್ತಾನದ ಏಕೈಕ ಟೆಸ್ಟ್ ಪಂದ್ಯ ರದ್ದು
ಗ್ರೇಟರ್ ನೊಯ್ಡಾ : ನ್ಯೂಝಿಲ್ಯಾಂಡ್ ಹಾಗೂ ಅಫ್ಘಾನಿಸ್ತಾನದ ನಡುವೆ ಉತ್ತರಪ್ರದೇಶದ ಶಾಹೀದ್ ವಿಜಯ್ ಸಿಂಗ್ ಪಾಥಿಕ್ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಏಕೈಕ ಟೆಸ್ಟ್ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ. ಶುಕ್ರವಾರ ಬೆಳಗ್ಗೆ ಪಂದ್ಯವನ್ನು ರದ್ದುಪಡಿಸಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಮಳೆ ಹಾಗೂ ತೇವಾಂಶದಿಂದ ಕೂಡಿದ್ದ ಹೊರಾಂಗಣದಿಂದಾಗಿ ಹಿಂದಿನ 4 ದಿನಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಐದನೇ ದಿನವಾದ ಶುಕ್ರವಾರ ಬೆಳಗ್ಗೆ ಪಂದ್ಯ ರದ್ದುಪಡಿಸುವ ನಿರ್ಧಾರವನ್ನು ಪ್ರಕಟಿಸಲಾಯಿತು.
ಇದೇ ಮೊದಲ ಬಾರಿ ಉಭಯ ತಂಡಗಳು ಟೆಸ್ಟ್ ಪಂದ್ಯ ಆಡಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನ, ಕಳಪೆ ಚರಂಡಿ ವ್ಯವಸ್ಥೆಯಿಂದಾಗಿ ಒಂದೂ ದಿನವೂ ಪಂದ್ಯ ಆಡಲು ಸಾಧ್ಯವಾಗಲಿಲ್ಲ.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ಉಭಯ ತಂಡಗಳ ಮುಖ್ಯ ಕೋಚ್‌ಗಳು ಮಾಧ್ಯಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆನಂತರ ಟ್ರೋಫಿ ಪ್ರದಾನ ನಡೆಯಲಿದೆ ಎಂದು ಗುರುವಾರ ಸಂಜೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ)ಹೇಳಿಕೆಯೊಂದರಲ್ಲಿ ತಿಳಿಸಿತ್ತು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೀಗ ಎಂಟನೇ ಬಾರಿ ಪಂದ್ಯವೊಂದು ಒಂದೂ ಎಸೆತ ಕಾಣದೆ ರದ್ದಾಗಿದೆ.
1998ರಲ್ಲಿ ಇಂತಹ ಘಟನೆ ಕೊನೆಯ ಬಾರಿ ನಡೆದಿತ್ತು. ಡುನೆಡಿನ್‌ನಲ್ಲಿ ನಡೆದಿದ್ದ ಭಾರತ-ನ್ಯೂಝಿಲ್ಯಾಂಡ್ ನಡುವಿನ ಪಂದ್ಯವು ಮೂರನೇ ದಿನ ರದ್ದುಪಡಿಸಲಾಗಿತ್ತು.
►ಒಂದೂ ಎಸೆತ ಕಾಣದೆ ರದ್ದುಗೊಂಡಿರುವ ಟೆಸ್ಟ್ ಪಂದ್ಯಗಳ ಸಂಪೂರ್ಣ ಪಟ್ಟಿ
25-08-1890: ಆಸ್ಟ್ರೇಲಿಯ-ಇಂಗ್ಲೆಂಡ್, ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್
8-7-1938: ಆಸ್ಟ್ರೇಲಿಯ-ಇಂಗ್ಲೆಂಡ್, ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್
31-12-1970: ಆಸ್ಟ್ರೇಲಿಯ-ಇಂಗ್ಲೆಂಡ್, ಮೆಲ್ಬರ್ನ್ ಕ್ರಿಕೆಟ್ ಮೈದಾನ
3-2-1989: ನ್ಯೂಝಿಲ್ಯಾಂಡ್-ಪಾಕಿಸ್ತಾನ-ಡುನೆಡಿನ್
10-3-1990: ಇಂಗ್ಲೆಂಡ್-ವೆಸ್ಟ್‌ಇಂಡೀಸ್, ಜಾರ್ಜ್‌ಟೌನ್, ಗಯಾನ
17-12-1998: ಪಾಕಿಸ್ತಾನ-ಝಿಂಬಾಬ್ವೆ, ಇಕ್ಬಾಲ್ ಸ್ಟೇಡಿಯಮ್, ಫೈಸಲಾಬಾದ್
18-12-1998: ಭಾರತ-ನ್ಯೂಝಿಲ್ಯಾಂಡ್, ಡುನೆಡಿನ್.