ಭಾರತದ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನ್ಯೂಝಿಲ್ಯಾಂಡ್ ಜಯಭೇರಿ, ಸರಣಿ ಸಮಬಲ

Update: 2024-10-27 17:08 GMT

PC: White Ferns\ X

ಅಹ್ಮದಾಬಾದ್ : ರಾಧಾ ಯಾದವ್ ಆಲ್‌ರೌಂಡ್ ಆಟದ(48 ರನ್, 4-69)ಹೊರತಾಗಿಯೂ ಆತಿಥೇಯ ಭಾರತ ಮಹಿಳಾ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡದ ವಿರುದ್ಧ ರವಿವಾರ ನಡೆದ 2ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ 76 ರನ್ ಅಂತರದಿಂದ ಸೋಲುಂಡಿದೆ.

ನ್ಯೂಝಿಲ್ಯಾಂಡ್ ತಂಡದ ನಾಯಕಿ ಸೋಫಿ ಡಿವೈನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಹತ್ವದ ಕೊಡುಗೆ ನೀಡಿ ಗೆಲುವಿನ ರೂವಾರಿಯಾದರು.

ಈ ಗೆಲುವಿನ ಮೂಲಕ ನ್ಯೂಝಿಲ್ಯಾಂಡ್ ತಂಡವು 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಭಾರತ ತಂಡವು ಮೊದಲ ಪಂದ್ಯವನ್ನು 59 ರನ್‌ಗಳಿಂದ ಗೆದ್ದುಕೊಂಡಿತ್ತು.

ರವಿವಾರ ನಡೆದ ಅಹರ್ನಿಶಿ ಪಂದ್ಯದಲ್ಲಿ ಗೆಲ್ಲಲು 260 ರನ್ ಗುರಿ ಪಡೆದಿದ್ದ ಭಾರತ ತಂಡವು ನ್ಯೂಝಿಲ್ಯಾಂಡ್‌ ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 47.1 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟಾಗಿದೆ.

ಭಾರತ ತಂಡದ ಪರ ಕೆಳ ಕ್ರಮಾಂಕದಲ್ಲಿ ರಾಧಾ ಯಾದವ್(48 ರನ್, 64 ಎಸೆತ, 5 ಬೌಂಡರಿ)ಏಕಾಂಗಿ ಹೋರಾಟ ನೀಡಿದರು. ಬೌಲರ್ ಸೈಮಾ ಠಾಕೂರ್(29 ರನ್, 54 ಎಸೆತ), ನಾಯಕಿ ಹರ್ಮನ್‌ ಪ್ರೀತ್ ಕೌರ್(24 ರನ್, 35 ಎಸೆತ)ಹಾಗೂ ಜೆಮಿಮಾ ರೋಡ್ರಿಗಸ್(17 ರನ್, 28 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಎರಡು ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಶೆಫಾಲಿ ವರ್ಮಾ(11ರನ್), ಯಸ್ತಿಕಾ ಭಾಟಿಯಾ(12 ರನ್) ವಿಫಲರಾದರು. 18ನೇ ಓವರ್‌ ನಲ್ಲಿ 77 ರನ್‌ಗೆ 5 ವಿಕೆಟ್‌ ಗಳನ್ನು ಕಳೆದುಕೊಂಡ ಭಾರತ ತಂಡವು ಆರಂಭಿಕ ಕುಸಿತ ಕಂಡಿತು. ರಾಧಾ ಯಾದವ್ ಹಾಗೂ ಸೈಮಾ ಠಾಕೂರ್ 9ನೇ ವಿಕೆಟ್‌ಗೆ 70 ರನ್ ಸೇರಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.

ನ್ಯೂಝಿಲ್ಯಾಂಡ್ ಪರ ಸೋಫಿ ಡಿವೈನ್(3-27) ಬೌಲಿಂಗ್‌ ನಲ್ಲೂ ಮಿಂಚಿದರು. ಲೀ ತಹುಹು(3-42), ಏಡೆನ್ ಕಾರ್ಸನ್(2-32) ಹಾಗೂ ಜೆಸ್ ಕೆರ್ರ್(2-49) ಭಾರತ ತಂಡವನ್ನು 183 ರನ್‌ ಗೆ ನಿಯಂತ್ರಿಸಲು ನೆರವಾದರು.

►ನ್ಯೂಝಿಲ್ಯಾಂಡ್ 259/9:

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಝಿಲ್ಯಾಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 259 ರನ್ ಗಳಿಸಿತು.

ನಾಯಕಿ ಸೋಫಿ ಡಿವೈನ್(79 ರನ್, 86 ಎಸೆತ, 7 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಆಟಗಾರ್ತಿಯರಾದ ಸುಝಿ ಬೇಟ್ಸ್ (58 ರನ್, 70 ಎಸೆತ)ಹಾಗೂ ಜಾರ್ಜಿಯ ಪ್ಲಿಮ್ಮರ್(41 ರನ್, 50 ಎಸೆತ)15.3 ಓವರ್‌ಗಳಲ್ಲಿ 87 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.

ಡಿವೈನ್ ಹಾಗೂ ಮ್ಯಾಡಿ ಗ್ರೀನ್(42 ರನ್, 41 ಎಸೆತ) 5ನೇ ವಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಹಿರಿಯ ಎಡಗೈ ಸ್ಪಿನ್ನರ್ ರಾಧಾ ಯಾದವ್(4-69) ಹಾಗೂ ದೀಪ್ತಿ ಶರ್ಮಾ(2-30) ಆರು ವಿಕೆಟ್‌ಗಳನ್ನು ಹಂಚಿಕೊಂಡರು.

ಸರಣಿಯ ಮೊದಲ ಪಂದ್ಯದಲ್ಲಿ ಗಾಯದಿಂದಾಗಿ ಆಡದ ನಾಯಕಿ ಹರ್ಮನ್‌ ಪ್ರೀತ್ ಈ ಪಂದ್ಯಕ್ಕೆ ವಾಪಸಾಗಿದ್ದರು. ಯುವ ಆಟಗಾರ್ತಿ ಪ್ರಿಯಾ ಮಿಶ್ರಾ ಮೊದಲ ಪಂದ್ಯವನ್ನು ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News