ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನ್ಯೂಝಿಲ್ಯಾಂಡ್ ಬ್ಯಾಟರ್ ಕಾಲಿನ್ ಮುನ್ರೊ ನಿವೃತ್ತಿ

Update: 2024-05-10 17:47 GMT

PC : X/@CricCrazyJohns

ಮೆಲ್ಬರ್ನ್: ನ್ಯೂಝಿಲ್ಯಾಂಡ್ ಪರ ಕೆಲವು ಬ್ಯಾಟಿಂಗ್ ದಾಖಲೆಗಳನ್ನು ಮುರಿದಿರುವ ದಕ್ಷಿಣ ಆಫ್ರಿಕಾದ ಸಂಜಾತ ಪವರ್ ಹಿಟ್ಟರ್ ಕಾಲಿನ್ ಮುನ್ರೊ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್ಗೆ ಕಿವೀಸ್ ಪ್ರಕಟಿಸಿದ ತಂಡದಿಂದ ವಂಚಿತರಾದ ನಂತರ ಮುನ್ರೊ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

37ರ ಹರೆಯದ ಎಡಗೈ ಬ್ಯಾಟರ್ ಮುನ್ರೊ 2020ರಲ್ಲಿ ಭಾರತ ವಿರುದ್ಧ ಟಿ20 ಪಂದ್ಯವನ್ನಾಡಿದ್ದರು. ಇದು ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎನಿಸಿಕೊಂಡಿದೆ.

ನಾನು ಕೊನೆಯ ಪಂದ್ಯ ಆಡಿ ದೀರ್ಘ ಸಮಯವಾಗಿದ್ದರೂ ಕಿವೀಸ್ ತಂಡಕ್ಕೆ ವಾಪಸಾಗುವ ವಿಶ್ವಾಸದಲ್ಲಿದ್ದೆ. ಟಿ20 ವಿಶ್ವಕಪ್ಗೆ ಕಿವೀಸ್ ತಂಡವನ್ನು ಪ್ರಕಟಿಸಲಾಗಿದೆ. ಈಗ ನಿವೃತ್ತಿ ಘೋಷಿಸಲು ಸರಿಯಾದ ಸಮಯ ಎಂದು ಶುಕ್ರವಾರ ಮುನ್ರೊ ಹೇಳಿದ್ದಾರೆ.

ಡರ್ಬನ್ನಲ್ಲಿ ಜನಿಸಿದ್ದ ಮುನ್ರೊ 2012ರಲ್ಲಿ ತನ್ನ ತಾಯ್ನಾಡು ದಕ್ಷಿಣ ಆಫ್ರಿಕಾ ವಿರುದ್ಧವೇ ಚೊಚ್ಚಲ ಟಿ20 ಪಂದ್ಯ ಆಡಿದ್ದರು. ನ್ಯೂಝಿಲ್ಯಾಂಡ್ ಪರ 122 ಸೀಮಿತ ಓವರ್ ಪಂದ್ಯಗಳನ್ನು ಆಡಿದ್ದಾರೆ. 2013ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು.

2018ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ 47 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ಆ ಕಾಲದಲ್ಲಿ ನ್ಯೂಝಿಲ್ಯಾಂಡ್ ಪರ ವೇಗದ ಟಿ20 ಶತಕವಾಗಿತ್ತು. ಟಿ20 ಕ್ರಿಕೆಟ್ನಲ್ಲಿ ಮೂರು ಶತಕ ಗಳಿಸಿರುವ ಮೊದಲ ಆಟಗಾರನಾಗಿದ್ದಾರೆ.

2016ರಲ್ಲಿ ಆಕ್ಲಂಡ್ನ ಈಡನ್ಪಾರ್ಕ್ನಲ್ಲಿ ಶ್ರೀಲಂಕಾದ ವಿರುದ್ಧ 14 ಎಸೆತಗಳಲ್ಲಿ ಮುನ್ರೊ ಅರ್ಧಶತಕ ಗಳಿಸಿದ್ದರು. ಇದು ಟಿ20ಯಲ್ಲಿ ನ್ಯೂಝಿಲ್ಯಾಂಡ್ ಆಟಗಾರ ಗಳಿಸಿದ ವೇಗದ ಅರ್ಧಶತಕವಾಗಿದೆ. ಒಟ್ಟಾರೆ ಇದು 4ನೇ ವೇಗದ ಅರ್ಧಶತಕವಾಗಿದೆ.

ಎರಡು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಮುನ್ರೊ 2019ರ ವಿಶ್ವಕಪ್ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಕಿವೀಸ್ ಆಘಾತಕಾರಿ ಸೋಲನುಭವಿಸಿದ್ದಾಗ ತಂಡದ ಸದಸ್ಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News