47 ರನ್ ಗೆ ಆಲೌಟಾದ ಒಮಾನ್ : ಟಿ-20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಭರ್ಜರಿ ಜಯ
ಆ್ಯಂಟಿಗುವಾ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಶನಿವಾರ ಒಮಾನ್ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ತಂಡ ಇನ್ನೂ 101 ಎಸೆತಗಳು ಬಾಕಿ ಇರುವಾಗಲೇ 48 ರನ್ ಗುರಿಯನ್ನು ತಲುಪಿದೆ. ಈ ಮೂಲಕ ಪುರುಷರ ಟಿ-20 ವಿಶ್ವಕಪ್ ನಲ್ಲಿ ಭರ್ಜರಿ ಜಯ ದಾಖಲಿಸಿದೆ.
2014ರಲ್ಲಿ 90 ಎಸೆತಗಳು ಬಾಕಿ ಇರುವಾಗಲೇ ಶ್ರೀಲಂಕಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿತ್ತು. ಲಂಕಾ ತಂಡ 5 ಓವರ್ಗಳಲ್ಲಿ 40 ರನ್ ಗುರಿಯನ್ನು ಬೆನ್ನಟ್ಟಿತ್ತು.
ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡ 13.2 ಓವರ್ ಗಳಲ್ಲಿ ಕೇವಲ 47 ರನ್ಗೆ ಆಲೌಟಾಗಿದೆ, ಇದರೊಂದಿಗೆ ಪುರುಷರ ಟಿ-20 ವಿಶ್ವಕಪ್ ನಲ್ಲಿ ನಾಲ್ಕನೇ ಕನಿಷ್ಠ ಸ್ಕೋರ್ ಗಳಿಸಿದ ತಂಡ ಎನಿಸಿಕೊಂಡಿತು. 39 ರನ್ ಗೆ ಆಲೌಟ್ ಅತ್ಯಂತ ಕನಿಷ್ಠ ಸ್ಕೋರಾಗಿದೆ. 2014ರಲ್ಲಿ ಶ್ರೀಲಂಕಾದ ವಿರುದ್ಧ ನೆದರ್ಲ್ಯಾಂಡ್ಸ್ ಈ ಕಳಪೆ ಪ್ರದರ್ಶನ ನೀಡಿತ್ತು.
ಒಮಾನ್ ತಂಡ ಟಿ-20 ಮಾದರಿಯ ಕ್ರಿಕೆಟ್ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ. 2022ರಲ್ಲಿ ನೇಪಾಳದ ವಿರುದ್ಧ 78 ರನ್ ಗಳಿಸಿ ಆಲೌಟಾಗಿತ್ತು. ಒಮಾನ್ ತಂಡವು ಇಂಗ್ಲೆಂಡ್ ವಿರುದ್ಧ ಕನಿಷ್ಠ ಮೊತ್ತ ಗಳಿಸಿದ 2ನೇ ತಂಡವಾಗಿದೆ. 2019ರಲ್ಲಿ ವೆಸ್ಟ್ಇಂಡೀಸ್ 45 ರನ್ಗೆ ಆಲೌಟಾಗಿತ್ತು.
ಒಮಾನ್ ಪರ ಶುಐಬ್ ಖಾನ್ (11)ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.
ಜೋಫ್ರಾ ಆರ್ಚರ್(3-12), ಮಾರ್ಕ್ ವುಡ್(3-12) ಹಾಗೂ ಆದಿಲ್ ರಶೀದ್(4-11) ಪುರುಷರ ಟಿ-20 ವಿಶ್ವಕಪ್ನ ಇನಿಂಗ್ಸ್ವೊಂದರಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದ ಮೊದಲ ತ್ರಿವಳಿ ಬೌಲರ್ ಆಗಿದ್ದಾರೆ. ಪುರುಷರ ಟಿ-20 ಇನಿಂಗ್ಸ್ಗಳಲ್ಲಿ 18 ಬಾರಿ ಮೂವರು ಬೌಲರ್ಗಳು 3 ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದರು. ಆದರೆ ವಿಶ್ವಕಪ್ನಲ್ಲಿ ಇದು ಸಾಧ್ಯವಾಗಿರಲಿಲ್ಲ.
ಇಂಗ್ಲೆಂಡ್ನ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (12 ರನ್, 3 ಎಸೆತ)ಅವರು ಪುರುಷರ ಟಿ-20 ಇನಿಂಗ್ಸ್ನ ಮೊದಲೆರಡು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ತಂಝಾನಿಯದ ಇವಾನ್ ಸೆಲೆಮನಿ 2022ರಲ್ಲಿ ರವಾಂಡದ ಮಾರ್ಟಿನ್ ವಿರುದ್ಧ ಟಿ-20 ಪಂದ್ಯದಲ್ಲಿ ಮೊದಲೆರಡು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ್ದರು.
ನಾಯಕ ಜೋಸ್ ಬಟ್ಲರ್(ಔಟಾಗದೆ 24, 8 ಎಸೆತ)ಹಾಗೂ ಜಾನಿ ಬೈರ್ಸ್ಟೋವ್(ಔಟಾಗದೆ 8) ಇಂಗ್ಲೆಂಡ್ ತಂಡವು 3.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಲು ನೆರವಾದರು.
11 ರನ್ ನೀಡಿ 4 ವಿಕೆಟ್ಗಳನ್ನು ಪಡೆದಿರುವ ಸ್ಪಿನ್ನರ್ ಆದಿಲ್ ರಶೀದ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ಒಮಾನ್: 13.2 ಓವರ್ಗಳಲ್ಲಿ 47/10
(ಶುಐಬ್ ಖಾನ್ 11, ಕಶ್ಯಪ್ ಪ್ರಜಾಪತಿ 9, ಆದಿಲ್ ರಶೀದ್ 4-11, ಮಾರ್ಕ್ ವುಡ್ 3-12, ಆರ್ಚರ್ 3-12)
ಇಂಗ್ಲೆಂಡ್: 3.1 ಓವರ್ಗಳಲ್ಲಿ 50/2
(ಜೋಸ್ ಬಟ್ಲರ್ ಔಟಾಗದೆ 24, ಸಾಲ್ಟ್ 12, ಕಲೀಮುಲ್ಲಾ 1-10, ಬಿಲಾಲ್ ಖಾನ್ 1-36)