ಪಾಕ್ ನಾಯಕ ಕುಳಿತಿದ್ದಾರೆ.. ಗೌರವ ಕೊಡಿ : ಪತ್ರಿಕಾಗೋಷ್ಠಿಯಲ್ಲೊಂದು ಪ್ರಹಸನ!

Update: 2024-10-01 03:59 GMT

ಶಾನ್‌ ಮಸೂದ್‌ | Photo : x/@dhillow_

ಇಸ್ಲಾಮಾಬಾದ್: ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶಾನ್ ಮಸೂದ್ ಕರೆದಿದ್ದ ಪತ್ರಿಕಾಗೋಷ್ಠಿಯು ಸೋಮವಾರ ಅತ್ಯಂತ ಮುಜುಗರದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪತ್ರಕರ್ತರ ಪ್ರಶ್ನೆಗಳಿಗೆ ನಾಯಕ ತಬ್ಬಿಬ್ಬಾದಾಗ ಮಧ್ಯಪ್ರವೇಶಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ನಿರ್ದೇಶಕರು, ನಾಯಕನನ್ನು ಅಗೌರವದಿಂದ ಕಂಡ ಪತ್ರಕರ್ತರ ವಿರುದ್ಧ ಹರಿಹಾಯ್ದರು. ನಾಯಕನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಪ್ರಶ್ನಿಸುತ್ತಿರುವ ಪ್ರಯತ್ನವನ್ನು ಖಂಡಿಸಿದರು.

"ಒಂದು ಕೊನೆಯ ವಿನಮ್ರ ವಿನಂತಿ" ಎಂದು ಪಿಸಿಬಿ ಮಾಧ್ಯಮ ಮತ್ತು ಸಂವಹನ ವಿಭಾಗದ ನಿರ್ದೇಶಕ ಸಮಿ ಉಲ್ ಸನ್ ಪತ್ರಿಕಾಗೋಷ್ಠಿ ಮಗಿದಾಗ ಕೇಳಿಕೊಂಡರು. "ಪಾಕಿಸ್ತಾನ್ ಕಾ ಕ್ಯಾಪ್ಟನ್ ಬೈಠಾ ಹೇ, ಆಪ್ ಬಿಲ್‍ಕುಲ್ ಸಾವಲ್ ಕರೇಂ (ಪಾಕಿಸ್ತಾನದ ನಾಯಕ ಕುಳಿತಿದ್ದಾರೆ. ನೀವು ಖಂಡಿತವಾಗಿಯೂ ಪ್ರಶ್ನೆಗಳನ್ನು ಕೇಳಿ). ಆದರೆ ದಯವಿಟ್ಟು ಗೌರವ ಕೊಡಿ.. ನೀವು ಕೇಳುವ ಪ್ರಶ್ನೆಗಳು ಪಾಕಿಸ್ತಾನದ ನಾಯಕನನ್ನು ಪ್ರಶ್ನಿಸುವ ಸಮರ್ಪಕ ವಿಧಾನ ಅಲ್ಲ" ಎಂದು ಹೇಳಿದರು.

ಟೆಸ್ಟ್ ತಂಡದ ನಾಯಕನಾಗಿ ಮಸೂದ್ ಅವರನ್ನು ಉಳಿಸಿಕೊಂಡ ಬಳಿಕ ಇದು ನಾಯಕನ ಮೊದಲ ಪತ್ರಿಕಾಗೋಷ್ಠಿಯಾಗಿತ್ತು. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯ ಮೊದಲ ಪಂದ್ಯಕ್ಕೆ ನಾಯಕನನ್ನಾಗಿ ಮಸೂದ್ ಉಳಿದುಕೊಂಡಿದ್ದಾರೆ.

ಉತ್ತಮ ಸಾಧನೆ ಮಾಡದ ಆಟಗಾರರನ್ನು ಕೂಡಾ ತಂಡದಲ್ಲಿ ಉಳಿಸಿಕೊಂಡಿರುವ ಬಗ್ಗೆ ಪಿಸಿಬಿ ಮತ್ತು ಆಯ್ಕೆ ಸಮಿತಿ ಬಗ್ಗೆ ವ್ಯಾಪಕ ಟೀಕೆಗಳಿವೆ. ಸರಣಿ ಸೋಲುಗಳ ಬಳಿಕವೂ ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಸಾಧನೆ ಮಾಡಿರುವ ಯುವ ಪ್ರತಿಭಾವಂತ ಆಟಗಾರರನ್ನು ನಿರ್ಲಕ್ಷಿಸಿರುವ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳಿವೆ. ಈ ಹಿನ್ನೆಲೆಯಲ್ಲೇ ಆಯ್ಕೆ ಸಮಿತಿ ಅಧ್ಯಕ್ಷ ಮುಹಮ್ಮದ್ ಯೂಸೂಫ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News