ಜಾವಲಿನ್ ಎಸೆದು ಒಲಂಪಿಕ್ ರೆಕಾರ್ಡ್ ಮುರಿದ ಪಾಕಿಸ್ತಾನದ ಅರ್ಷದ್ ನದೀಂ
ಪಾಕಿಸ್ತಾನದ ಜಾವೆಲಿನ್ ಎಸೆತೆಗಾರ ಅರ್ಷದ್ ನದೀಂ ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಜಾಗತಿಕ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಕೀರ್ತಿ ಪತಾಕೆ ಹಾರಿಸಿ ಆ ದೇಶದ ಕಣ್ಮಣಿ ಆಗಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಮರೆತೇ ಹೋಗಿದ್ದ ಪಾಕಿಸ್ತಾನ ಈಗ ಆಂತರಿಕ ಸಮಸ್ಯೆಗಳಿಂದ ಜರ್ಜರಿತವಾಗಿರುವಾಗ ಅದಕ್ಕೆ ದೊಡ್ಡ ಸಂಭ್ರಮ ತಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇವರು ಚಿನ್ನದ ಪದಕವನ್ನು ಗೆದ್ದಿದ್ದಾರೆ ಮಾತ್ರವಲ್ಲ ಹೊಸ ಒಲಿಂಪಿಕ್ಸ್ ದಾಖಲೆಯನ್ನು ಬರೆದಿದ್ದಾರೆ.
ಒಂದಲ್ಲ, ಎರಡೆರಡು ಬಾರಿ ಅರ್ಷದ್, ಈ ಹಿಂದಿನ ಒಲಂಪಿಕ್ಸ್ ದಾಖಲೆಗಿಂತ ದೂರ ಜಾವೆಲಿನ್ ಎಸೆದರು. ಅರ್ಷದ್ 92.97 ಮೀಟರ್ ದೂರ ಜಾವೆಲಿನ್ ಎಸೆದು ಜಾಗತಿಕ ದಾಖಲೆ ಬರೆದು ಒಲಿಂಪಿಕ್ಸ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
2008 ರಲ್ಲಿ ಬೀಜಿಂಗ್ ನ ದಾಖಲೆಯನ್ನು ಅರ್ಷದ್ ಮುರಿದರು. ಅರ್ಷದ್ ಎರಡು ಬಾರಿ ತಮ್ಮದೇ ಅತ್ಯುತ್ತಮ ಎಸೆತಕ್ಕಿಂತ ದೂರ ಜಾವೆಲಿನ್ ಎಸೆದರು. ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕ ಗೆಲ್ಲುತ್ತಾ ಎಸೆದ ತಮ್ಮ ವೈಯಕ್ತಿಕ ಶ್ರೇಷ್ಠ 90.18 ಮೀಟರ್ ದೂರದ ಎಸೆತವನ್ನು ಅರ್ಷದ್ ಪ್ಯಾರಿಸ್ ನಲ್ಲಿ ದಾಟಿದರು.
ಜನವರಿ 2, 1997ರಲ್ಲಿ ಪಾಕಿಸ್ತಾನದ ಪಂಜಾಬಿನ ಮಿಯಾನ್ ಚನ್ನು ಹೆಸರಿನ ಗ್ರಾಮದಲ್ಲಿ ಅರ್ಷದ್ ಜನಿಸಿದರು. 8 ಮಕ್ಕಳಲ್ಲಿ ಮೂರನೆಯವರು ಅರ್ಷದ್. ಕುಟುಂಬದಲ್ಲಿ ತಂದೆ ಒಬ್ಬರೇ ಸಂಪಾದಿಸುತ್ತಿದ್ದರಿಂದ ತುಂಬಾ ಕಷ್ಟಪಟ್ಟು ದಿನನಿತ್ಯದ ಖರ್ಚುಗಳು ಸಾಗುತ್ತಿದ್ದವು.ಮೊದಲು ಕ್ರಿಕೆಟಿನಲ್ಲಿ ಆಸಕ್ತಿ ತೋರಿಸಿದ್ದ ಅರ್ಷದ್ ಜಾವೆಲಿನ್ ಕಡೆಗೆ ಒಲವು ತೋರಿಸಿದಾಗಲೂ ಹಣದ ಸಮಸ್ಯೆ ತೀವ್ರವಾಗಿ ಕಾಡಿತು.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಅರ್ಷದ್ ಅವರ ಸ್ಪರ್ಧೆಯ ವೆಚ್ಚಗಳಿಗಾಗಿ ಅವರ ಗ್ರಾಮಸ್ಥರು ಹಣವನ್ನು ದೇಣಿಗೆ ನೀಡುತ್ತಿದ್ದರು. ಅರ್ಷದ್ ಇಲ್ಲಿಯವರೆಗೆ ಹೇಗೆ ತಲುಪಿದ್ದಾರೆ ಎಂದು ಜನರಿಗೆ ತಿಳಿದಿಲ್ಲ. ಅವರು ಸ್ಪರ್ಧೆಗಳಿಗೆ ಭಾಗವಹಿಸಲು ಬೇರೆ ಬೇರೆ ನಗರಕ್ಕೆ ಹೋಗಬೇಕಾಗಿತ್ತು. ಆ ಖರ್ಚುಗಳನ್ನು ಭರಿಸಲು ಅವರ ಗ್ರಾಮಸ್ಥರು ಮತ್ತು ಕುಟುಂಬಸ್ಥರು ದೇಣಿಗೆ ನೀಡುತ್ತಿದ್ದರು ಎಂದು ಅರ್ಷದ್ ತಂದೆ ಹೇಳಿದ್ದಾರೆ.
ಅರ್ಷದ್ ಅಂತರಾಷ್ಟ್ರೀಯ ಮಟ್ಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರೂ ಅವರ ಸಮಸ್ಯೆಗಳು ಮುಗಿಯಲಿಲ್ಲ. ಹಣದ ಸಮಸ್ಯೆ ಇತ್ತೀಚಿನವರೆಗೂ ಅವರನ್ನು ಕಾಡುತ್ತಿತ್ತು. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡರೂ ಯಾವುದೇ ರೀತಿಯ ಆರ್ಥಿಕ ನೆರವು ಅರ್ಷದ್ ಗೆ ಸಿಗಲಿಲ್ಲ.
ಐದು ತಿಂಗಳ ಹಿಂದೆ 2015 ರಿಂದ ನಾನು ಉಪಯೋಗಿಸುತ್ತಿರುವ ಜಾವೆಲಿನ್ ಹಾಳಾಗಿ ಹೋಗಿದೆ. ಹೊಸ ಜಾವೆಲಿನ್ ಅಗತ್ಯವಿದೆಯೆಂದು ಅರ್ಷದ್ ಕೇಳಿಕೊಂಡಿದ್ದರು. ಪಾಕಿಸ್ತಾನಿ ಫೆಡರೇಷನ್ ನಿಂದ ಸಹಾಯ ಕೋರಿದ್ದರು. ಅರ್ಷದ್ ಪರವಾಗಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಕೂಡ ಧ್ವನಿ ಎತ್ತಿ ಅವರನ್ನು ಬೆಂಬಲಿದ್ದರು.
ಈಗ ಅರ್ಷದ್ ಒಲಿಂಪಿಕ್ಸ್ ನಲ್ಲಿ ನೀರಜ್ ರನ್ನು ಹಿಂದಿಕ್ಕಿ ಚಿನ್ನ ಗೆದ್ದಿರುವಾಗ ನೀರಜ್ ರ ತಾಯಿ ಅರ್ಷದ್ ಕೂಡ ನನ್ನ ಮಗನ ಹಾಗೆಯೇ ಅಂತ ಹೇಳುವ ಮೂಲಕ ತಾವು ಅಪ್ಪಟ ಚಾಂಪಿಯನ್ ನ ತಾಯಿ ಎಂದು ಸಾಬೀತುಪಡಿಸಿದ್ದಾರೆ.
ಅತ್ತ ಅರ್ಷದ್ ನ ತಾಯಿ " ನಾನು ನೀರಜ್ ಚೋಪ್ರಾಗಾಗಿಯೂ ದುಆ ಮಾಡಿದ್ದೆ. ಅವನೂ ನನ್ನ ಮಗನ ಹಾಗೇ " ಎಂದು ಹೇಳಿ ತಮ್ಮ ಹೃದಯ ವೈಶಾಲ್ಯ ಮೆರೆದಿದ್ದಾರೆ.
ಆರ್ಥಿಕ ಸಮಸ್ಯೆಗಳಲ್ಲದೆ ಗಾಯಗಳಿಂದಲೂ ಅರ್ಷದ್ ಬಳಲುತ್ತಾ ಬಂದಿದ್ದಾರೆ. ಅವರು ಸರ್ಜರಿಗಳನ್ನೂ ಎದುರಿಸಬೇಕಾಗಿ ಬಂದಿತ್ತು.ಈಗ ಇದೆಲ್ಲ ಹಳೆಯ ವಿಷಯವಾಗಿವೆ. ಅರ್ಷದ್ ನದೀಮ್ ಪಾಕಿಸ್ತಾನದ ಹೀರೊ ಆಗಿದ್ದಾರೆ. ಅವರೀಗ ಅಲ್ಲಿನ ಸೂಪರ್ ಸ್ಟಾರ್.
ಅರ್ಷದ್ ಈಗ ಒಲಿಂಪಿಕ್ಸ್ ಚಾಂಪಿಯನ್. ಸರ್ಕಾರದಿಂದ ಯಾವುದೇ ಸಹಾಯವಿಲ್ಲದೇ ಪಾಕಿಸ್ಥಾನದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮೇಲೆತ್ತಿದ್ದಾರೆ. ಪಾಕಿಸ್ತಾನದ ಪರ ಪ್ರಪ್ರಥಮ ಒಲಿಂಪಿಕ್ಸ್ ವೈಯಕ್ತಿಕ ಚಿನ್ನದ ಪದಕವನ್ನು ಅರ್ಷದ್ ಗೆದ್ದುಕೊಂಡಿದ್ದಾರೆ. 1992 ರ ನಂತರ ಒಲಿಂಪಿಕ್ಸ್ ನಲ್ಲಿ ಪಾಕಿಸ್ತಾನ ಗೆದ್ದ ಮೊದಲ ಪದಕ ಇದಾಗಿದೆ.
ಅರ್ಷದ್ ಪದಕ ಪಾಕಿಸ್ತಾನದ ಇತಿಹಾಸದಲ್ಲಿ 11ನೇ ಒಲಿಂಪಿಕ್ಸ್ ಪದಕ ಮತ್ತು ಮೂರನೇ ವೈಯಕ್ತಿಕ ಪದಕ. ಈ ಮೊದಲು ಕುಸ್ತಿ ಮತ್ತು ಬಾಕ್ಸಿಂಗ್ ನಲ್ಲಿ ತಲಾ ಒಂದೊಂದು ಕಂಚಿನ ಪದಕವನ್ನು ಪಾಕಿಸ್ತಾನ ಗೆದ್ದುಕೊಂಡಿತ್ತು. ಬೇರೆ ಎಲ್ಲ ಪದಕಗಳು ಪುರುಷರ ಹಾಕಿ ಯಲ್ಲಿ ಬಂದಿವೆ.
ಅರ್ಷದ್ ಈ ಚಿನ್ನದ ಗೆಲುವಿನಿಂದಾಗಿ ಪಾಕಿಸ್ತಾನ ಪದಕ ಶ್ರೇಯಾಂಕದಲ್ಲಿ ಭಾರತಕ್ಕಿಂತ ಮೇಲೆ ಬಂದಿದೆ. 4 ಕಂಚು ಮತ್ತು ಒಂದು ಬೆಳ್ಳಿ ಪದಕ ಗೆದ್ದಿರುವ ಭಾರತ 1 ಚಿನ್ನ ಗೆದ್ದಿರುವ ಪಾಕಿಸ್ತಾನಕ್ಕಿಂತ ಈಗ ಹಿಂದಿದೆ. ಅರ್ಷದ್ ನದೀಮ್ ನಿಸ್ಸಂದೇಹವಾಗಿ ಪಾಕಿಸ್ತಾನದ ಈ ವರೆಗಿನ ಗ್ರೇಟೆಸ್ಟ್ ಅಥ್ಲೀಟ್.
1992 ರ ಕ್ರಿಕೆಟ್ ವಿಶ್ವ ಕಪ್ ಗೆಲುವು ಪಾಕಿಸ್ತಾನಿಯರಿಗೆ ತಂದ ಖುಷಿಗಿಂತ ಹೆಚ್ಚು ಖುಷಿಯನ್ನು ಅರ್ಷದ್ ರ 92 ಮೀಟರ್ ದೂರದ ಜಾವೆಲಿನ್ ಎಸೆತ ಇದೀಗ ತಂದಿದೆ.