ಪಾಕಿಸ್ತಾನಿ ಬಿಲಿಯರ್ಡ್ಸ್, ಸ್ನೂಕರ್ ಆಟಗಾರರಿಗೆ ವೀಸಾ ನಿರಾಕರಣೆ

Update: 2024-08-25 17:17 GMT

Photo : AI

ಇಸ್ಲಾಮಾಬಾದ್ : ಐಬಿಎಸ್ಎಫ್ ಅಂಡರ್ 18 ಮತ್ತು ಅಂಡರ್ 21 ವಿಶ್ವ ಚಾಂಪಿಯನ್ಶಿಪ್ಸ್ನಲ್ಲಿ ಪಾಲ್ಗೊಳ್ಳುವ ತಮ್ಮ ತಂಡಕ್ಕೆ ಭಾರತೀಯ ಹೈಕಮಿಶನ್ ವೀಸಾಗಳನ್ನು ನಿರಾಕರಿಸಿದೆ ಎಂದು ಆರೋಪಿಸಿ ಪಾಕಿಸ್ತಾನ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಸೋಸಿಯೇಶನ್ (ಪಿಬಿಎಸ್ಎ) ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಮತ್ತು ಸಂಘಟಕರಿಗೆ ದೂರು ಸಲ್ಲಿಸಿದೆ.

ಕ್ರೀಡಾಕೂಟವು ಬೆಂಗಳೂರಿನಲ್ಲಿ ಶನಿವಾರ ಆರಂಭಗೊಂಡಿದೆ.

ನಮ್ಮ ಮೂರು ಆಟಗಾರರಾದ ಅಹ್ಸಾನ್ ರಮಝಾನ್, ಹಸ್ನೈನ್ ಅಖ್ತರ್ ಮತ್ತು ಹಂಝ ಇಲ್ಯಾಸ್ರಿಗೆ ವೀಸಾಗಳನ್ನು ನಿರಾಕರಿಸಲಾಗಿದೆ ಎಂದು ಪಿಬಿಎಸ್ಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘‘ನಮ್ಮ ಸರಕಾರ ಮತ್ತು ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ ಎಲ್ಲಾ ಅನುಮತಿಗಳನ್ನು ಪಡೆದ ಬಳಿಕ ನಾವು ವೀಸಾಗಳನ್ನು ಕೋರಿ ಸರಿಯಾದ ಸಮಯದಲ್ಲಿ ಭಾರತೀಯ ಹೈ ಕಮಿಶನ್ಗೆ ಅರ್ಜಿಗಳನ್ನು ಸಲ್ಲಿಸಿದ್ದೆವು. ಆದರೆ ಅವರು ವೀಸಾಗಳನ್ನು ನೀಡಲಿಲ್ಲ. ಹಾಗಾಗಿ, ನಮ್ಮ ತಂಡಕ್ಕೆ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ’’ ಎಂದು ಅಲಮ್ಗಿರ್ ಶೇಖ್ ಹೇಳಿದರು.

ಈ ಮೂವರು ಆಟಗಾರರು ಇತ್ತೀಚೆಗೆ ಪಾಕಿಸ್ತಾನದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಹೇಳಿದ ಅವರು, ಜಾಗತಿಕ ಕ್ರೀಡಾಕೂಟಗಳಲ್ಲಿಯೂ ಅವರು ಉತ್ತಮ ನಿರ್ವಹಣೆ ನೀಡುವ ಸಾಧ್ಯತೆಗಳಿದ್ದವು ಎಂದು ಅಭಿಪ್ರಾಯಪಟ್ಟರು. ಆದರೆ, ಈ ಅವಕಾಶಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ ಎಂದು ಅವರು ನುಡಿದರು.

‘‘ನಮ್ಮ ಓರ್ವ ರೆಫರಿ ನವೀದ್ ಕಪಾಡಿಯರನ್ನು ಜಾಗತಿಕ ಕ್ರೀಡಾಕೂಟಗಳ ಉಸ್ತುವಾರಿಗೆ ಐಬಿಎಸ್ಎಫ್ ನಾಮಕರಣಗೊಳಿಸಿತ್ತು. ವೀಸಾ ಸಿಗದ ಕಾರಣ ಅವರಿಗೂ ಬೆಂಗಳೂರಿಗೆ ಹೋಗಲು ಸಾಧ್ಯವಾಗಲಿಲ್ಲ’’ ಎಂದು ಶೇಖ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News