ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ
ಹೊಸದಿಲ್ಲಿ: ನಾಯಕ ರಿಷಭ್ ಪಂತ್(ಔಟಾಗದೆ 88, 43 ಎಸೆತ, 5 ಬೌಂಡರಿ, 8 ಸಿಕ್ಸರ್)ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (66 ರನ್, 43 ಎಸೆತ, 5 ಬೌಂಡರಿ, 4 ಸಿಕ್ಸರ್)ಅರ್ಧಶತಕಗಳ ಕೊಡುಗೆ, ಕುಲದೀಪ್ ಯಾದವ್(2-29) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 4 ರನ್ ಅಂತರದಿಂದ ರೋಚಕವಾಗಿ ಮಣಿಸಿದೆ.
ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ಬುಧವಾರ ನಡೆದ ಐಪಿಎಲ್ನ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 224 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಗುಜರಾತ್ ಪರ ಸಾಯಿ ಸುದರ್ಶನ್(65 ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಶುಭಮನ್ ಗಿಲ್ ತನ್ನ 100ನೇ ಐಪಿಎಲ್ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ವೃದ್ದಿಮಾನ್ ಸ ಹಾ(39 ರನ್) , ಡೇವಿಡ್ ಮಿಲ್ಲರ್(55 ರನ್, 23 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ರಶೀದ್ ಖಾನ್(ಔಟಾಗದೆ 21 ರನ್, 11 ಎಸೆತ) ಒಂದಷ್ಟು ಹೋರಾಟ ನೀಡಿದರು.
ಡೆಲ್ಲಿ ಪರ ಕುಲದೀಪ್ ಯಾದವ್, ರಸಿಖ್ ಸಲಾಮ್(3-44)ಐದು ವಿಕೆಟ್ಗಳನ್ನು ಹಂಚಿಕೊಂಡರು.
ಈ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಡೆಲ್ಲಿ 5.4 ಓವರ್ಗಳಲ್ಲಿ 44 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಜೇಕ್ ಫ್ರೆಸರ್(23 ರನ್), ಪೃಥ್ವಿ ಶಾ(11 ರನ್) ಹಾಗೂ ಶಾಯ್ ಹೋಪ್(5 ರನ್) ಬೇಗನೆ ಔಟಾದರು. ಆಗ 4ನೇ ವಿಕೆಟ್ಗೆ 68 ಎಸೆತಗಳಲ್ಲಿ 113 ರನ್ ಜೊತೆಯಾಟ ನಡೆಸಿದ ಅಕ್ಷರ್ ಪಟೇಲ್ ಹಾಗೂ ಪಂತ್ ತಂಡವನ್ನು ಆಧರಿಸಿದರು.
ಪಟೇಲ್ ಔಟಾದ ನಂತರ ಸ್ಟಬ್ಸ್(ಔಟಾಗದೆ 26 ರನ್, 7 ಎಸೆತ, 3 ಬೌಂಡರಿ, 2 ಸಿಕ್ಸರ್) ಜೊತೆ ಕೈಜೋಡಿಸಿದ ಪಂತ್ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 18 ಎಸೆತಗಳಲ್ಲಿ 67 ರನ್ ಜೊತೆಯಟ ನಡೆಸಿ ತಂಡದ ಮೊತ್ತವನ್ನು 224ಕ್ಕೆ ತಲುಪಿಸಿದರು.
ಗುಜರಾತ್ ಪರ ವೇಗದ ಬೌಲರ್ ಸಂದೀಪ್ ವಾರಿಯರ್(3-15) ಅಗ್ರ ಕ್ರಮಾಂಕದ ಮೂವರು ಆಗಾರರನ್ನು ಪೆವಿಲಿಯನ್ಗೆ ಕಳುಹಿಸಿ ಯಶಸ್ವಿ ಪ್ರದರ್ಶನ ನೀಡಿದರು. ಆದರೆ ಹಿರಿಯ ವೇಗಿ ಮೋಹಿತ್ ಶರ್ಮಾ ತನ್ನ 4 ಓವರ್ಗಳ ಬೌಲಿಂಗ್ನಲ್ಲಿ 73 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.
ಮೋಹಿತ್ ತಾನೆಸೆದ ಅಂತಿಮ ಓವರ್ನಲ್ಲಿ 31 ರನ್ ಸೋರಿಕೆ ಮಾಡಿದರು. ಪಂತ್ ಅವರು ಮೋಹಿತ್ ಮೇಲರಗಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು.
ಗುಜರಾತ್ ಟೈಟಾನ್ಸ್: 20 ಓವರ್ಗಳಲ್ಲಿ 220/8
(ಸಾಯಿ ಸುದರ್ಶನ್ 65, ಡೇವಿಡ್ ಮಿಲ್ಲರ್ 55, ಸಹಾ 39, ರಶೀದ್ ಖಾನ್ 21,ಕುಲದೀಪ್ ಯಾದವ್ 2-29, ಸಲಾಮ್ 3-44)