ಪ್ಯಾರಾಲಿಂಪಿಕ್ಸ್: ಇತಿಹಾಸ ಸೃಷ್ಟಿಸಿದ ಪ್ರೀತಿ ಪಾಲ್
ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ & ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪ್ರೀತಿ ಪಾಲ್ ಪಾತ್ರರಾಗುವ ಮೂಲಕ ಭಾನುವಾರ ಇತಿಹಾಸ ಸೃಷ್ಟಿಸಿದರು. ಈ ಮಧ್ಯೆ ಟಿ47 ಪುರುಷರ ಹೈಜಂಪ್ ವಿಭಾಗದಲ್ಲಿ ನಿಶದ್ ಕುಮಾರ್ ಸತತ ಎರಡನೇ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
200 ಮೀಟರ್ ಟಿ35 ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡ ಪ್ರೀತಿ (23), ತಮ್ಮ ಅತ್ಯುತ್ತಮ ವೈಯಕ್ತಿಕ ದಾಖಲೆಯನ್ನು (30.01) ಉತ್ತಮಪಡಿಸಿಕೊಂಡರು. ಶುಕ್ರವಾರ ಅವರು 100 ಮೀಟರ್ ಟಿ35 ವರ್ಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ನಿಶದ್ (24) ಅವರು ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ 2.04 ಮೀಟರ್ ಗೆದ್ದು, ಭಾರತದ ಮೂರನೇ ಪ್ಯಾರಾ ಅಥ್ಲೆಟಿಕ್ ಪದಕ ಹಾಗೂ ಒಟ್ಟಾರೆಯಾಗಿ ದೇಶದ ಏಳನೇ ಪದಕ ಜಯಿಸಿದರು.
ಒಂದೇ ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಎರಡನೇ ಮಹಿಳೆ ಎಂಬ ದಾಖಲೆಗೆ ಪ್ರೀತಿ ಪಾಲ್ ಪಾತ್ರರಾದರು. ಮೂರು ವರ್ಷ ಮುನ್ನ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅವನಿ ಲೇಖರಾ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು. ಮಹಿಳೆಯರ 200 ಮೀಟರ್ ಟಿ35 ವಿಭಾಗದ ಫೈನಲ್ ನಲ್ಲಿ ಚೀನಾದ ಝೊಹು ಕ್ಸಿಯಾ 28.15 ಸೆಕೆಂಡ್ ಗಳಲ್ಲಿ ದೂರವನ್ನು ಕ್ರಮಿಸಿ ಚಿನ್ನದ ಪದಕ ಗೆದ್ದರು. ಗ್ಯೂಯೊ ಕ್ವಿಣಕಿಯಾನ್ 29.09 ಸೆಕೆಂಡ್ ಗಳೊಂದಿಗೆ ಎರಡನೇ ಬೆಳ್ಳಿ ಗೆದ್ದರು.
ನಿಶದ್ ತಮ್ಮ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಎದುರಿಸಿದರು. ವಿಶ್ವದಾಖಲೆ ವಿಜೇತ ಮತ್ತು ಚಾಂಪಿಯನ್ ಅಮೆರಿಕದ ಟೌನ್ ಶೆಡ್ ರಾಡ್ರಿಕ್ 2.12 ಮೀಟರ್ ಗಳೊಂದಿಗೆ ಚಿನ್ನದ ಪದಕ ಪಡೆದರೆ, ನ್ಯೂಟ್ರಲ್ ಪಾರಾಲಿಂಪಿಕ್ ಅಥ್ಲೀಟ್ ಮಾರ್ಗೀವ್ ಜಿಯೊಗ್ರಿಲ್ 2 ಮೀಟರ್ ಎತ್ತರಕ್ಕೆ ಹಾರಿ ಮೂರನೇ ಸ್ಥಾನ ಪಡೆದರು.