ಪ್ಯಾರಿಸ್ ಒಲಿಂಪಿಕ್ಸ್ | 25 ಮೀ . ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಕಂಚಿನ ರಾಣಿ ಮನು ಭಾಕರ್

Update: 2024-08-02 12:32 GMT

ಮನು ಭಾಕರ್ | PC : Olympics.com

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 25 ಪಿಸ್ತೂಲ್ ಸ್ಪರ್ಧೆಯಲ್ಲಿ ಶುಕ್ರವಾರ ಮನು ಭಾಕರ್ 590-24x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದರು.

ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶನಿವಾರ (ಆಗಸ್ಟ್ 3) ಮಧ್ಯಾಹ್ನ 1 ಗಂಟೆಗೆ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ ಮೂರನೇ ಪದಕದ ನಿರೀಕ್ಷೆಯಲ್ಲಿದ್ದಾರೆ.

ಭಾರತದ ಇಶಾ ಸಿಂಗ್ 581-17x ಅಂಕಗಳೊಂದಿಗೆ 18 ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ನಿಂದ ವಂಚಿತರಾದರು. ಫೈನಲ್‌ಗೆ ಅಗ್ರ ಎಂಟು ಶೂಟರ್‌ಗಳು ಮಾತ್ರ ಪ್ರವೇಶ ಪಡೆದರು. ಅರ್ಹತೆ ಪಡೆಯಲು ಕಟ್-ಆಫ್ ಸ್ಕೋರ್ 585 ಆಗಿತ್ತು.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮನು ಭಾಕರ್ ಅವರು ಎರಡು ಕಂಚಿನ ಪದಕ ಪಡೆದಿದ್ದಾರೆ. ಎರಡೂ ಕಂಚಿನ ಪದಕಗಳು 10m ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10m ಏರ್ ಶೂಟಿಂಗ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಬಂದಿವೆ. ಹರಿಯಾಣದ 22 ವರ್ಷದ ಶೂಟರ್ ಈಗ ಶನಿವಾರ ತನ್ನ ಪದಕದ ಬಣ್ಣವನ್ನು ಬದಲಾಯಿಸುವ ನಿರೀಕ್ಷೆಯಲ್ಲಿದ್ದಾರೆ.

ಮನು ಭಾಕರ್ ಶನಿವಾರ ಪದಕ ಗೆದ್ದರೆ, ಮೂರು ಒಲಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ವೈಯಕ್ತಿಕ ಅಥ್ಲೀಟ್ ಆಗಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ದಾಖಲೆಯನ್ನು ಅವರು ಈಗಾಗಲೇ ಹೊಂದಿದ್ದಾರೆ. ಅವರು ಒಲಿಂಪಿಕ್ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಕೂಡ.

ಹಂಗೇರಿಯ ವೆರೋನಿಕಾ ಮೇಜರ್ 592-28x ಸ್ಕೋರ್‌ನೊಂದಿಗೆ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಇದು ಭಾಕರ್‌ಗಿಂತ ಕೇವಲ ಎರಡು ಅಂಕಗಳು ಹೆಚ್ಚು ಮತ್ತು ಮಹಿಳೆಯರ 25 ಮೀ ಪಿಸ್ತೂಲ್ ಈವೆಂಟ್‌ನಲ್ಲಿ ಹೊಸ ಯುರೋಪಿಯನ್ ಅರ್ಹತಾ ದಾಖಲೆಯಾಗಿದೆ. ಇರಾನ್‌ನ ಹನಿಯೆಹ್ ರೋಸ್ತಮಿಯಾನ್ 588-18X ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News